

ಜಗಳೂರು: ಶಿಕ್ಷಣದಲ್ಲಿ ಕಲೆ ಉತ್ತೇಜಿಸುವ ಮೂಲಕ ಶಾಲಾ ವಿದ್ಯಾರ್ಥಿಗಳಲ್ಲಿರುವ ಕಲಾತ್ಮಕ ಪ್ರತಿಭೆ ಹಾಗೂ ಸೃಜನಾತ್ಮಕ ಕೌಶಲ ಹೊರತರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಮೂರ್ತಿ ಹೇಳಿದರು.
ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಸಂತೆಪೇಟೆ ಶಾಲೆಯಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲೆಗಳ ಟೌನ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಲ್ಲಿನ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಗಿದ್ದು, ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿಯಿಂದ ಭಾಗವಹಿಸಲು ನೆರವಾಗುತ್ತದೆ ಎಂದರು.
ಅಕ್ಷರ ದಾಸೋಹದ ಅಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ, ನಾವು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕಲಿಯುವಾಗ ಇಂತಹ ಯಾವುದೇ ಕಾರ್ಯಕ್ರಮಗಳು ಇರಲಿಲ್ಲ. ಇಂದು ಪ್ರತಿಭಾ ಕಾರಂಜಿಯಂತಹ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತೇಶ್, ಕಾರ್ಯದರ್ಶಿ ಅಂಜಿನಾಯ್ಕ, ನೌಕರರ ಸಂಘದ ಮಾಜಿ ಕಾರ್ಯದರ್ಶಿ ಸತೀಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್‌ರೆಡ್ಡಿ, ಹೊರಕೆರೆ ಶಾಲೆ ಮುಖ್ಯಶಿಕ್ಷಕ ವೀರೇಶ್, ಶಿಕ್ಷಕ ಹನುಮಂತಪ್ಪ ಮತ್ತಿತರರಿದ್ದರು.