

ಪುತ್ತೂರು: ಎಸ್ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್(ಆಯುರ್ವೇದ ಔಷಧ ತಯಾರಕರು) ವತಿಯಿಂದ ಎಸ್ಡಿಪಿ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ೨೧ನೇ ವರ್ಷದ ‘ಕಲೋಪಾಸನಾ ೨೦೨೫’ ಸಾಂಸ್ಕೃತಿಕ ಕಲಾ ಸಂಭ್ರಮ ಕಾರ್ಯಕ್ರಮ ಫೆ.೨೨ರಿಂದ ಫೆ.೨೪ರವರೆಗೆ ಎಸ್ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ಆವರಣದಲ್ಲಿ ನಡೆಯಲಿದೆ ಎಂದು ಪುತ್ತೂರು ಎಸ್ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ ತಿಳಿಸಿದ್ದಾರೆ.
೨೦ ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ಸಂಗೀತ, ಭರತನಾಟ್ಯ, ಬಡಗು-ತೆಂಕು ಯಕ್ಷಗಾನ ಕಲೋಪಾಸನಾ ವೇದಿಕೆಯಲ್ಲಿ ಮೂಡಿಬಂದಿದೆ. ಈ ವರ್ಷವೂ ಮೂರು ದಿನ ವಿಶಿಷ್ಟ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಮೊದಲ ದಿನ ಸಂಗೀತ ಹಾಗೂ ಉಳಿದೆರಡು ದಿನ ಯಕ್ಷಗಾನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರಲಿದೆ ಎಂದು ಗೋಷ್ಠಿಯಲ್ಲಿ ತಿಳಿಸಿದರು.
ಫೆ.೨೨ರಂದು ಸಂಜೆ ೬ಕ್ಕೆ ಪಾಣಾಜೆ ಸಬೋಧ ಹೈಸ್ಕೂಲ್ ನಿವೃತ್ತ ಮುಖ್ಯಶಿಕ್ಷಕ ಪಿ.ಕೃಷ್ಣ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದ್ದು, ಹಾಡುಗಾರಿಕೆಯಲ್ಲಿ ರಂಜನಿ ಗಾಯತ್ರಿ, ವಯಲಿನ್ನಲ್ಲಿ ಎಲ್.ರಾಮಕೃಷ್ಣನ್, ಮೃದಂಗದಲ್ಲಿ ದಿಲ್ಲಿ ಸಾಯಿರಾಮ್, ಘಟಂನಲ್ಲಿ ವಝಿಪಿಲ್ಲಿ ಕೃಷ್ಣ ಕುಮಾರ್ ಭಾಗವಹಿಸಲಿದ್ದಾರೆ. ಫೆ.೨೩ರಂದು ಸಂಜೆ ೬.೩೦ಕ್ಕೆ ಯಕ್ಷಗಾನ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಮೇಳದಿಂದ ‘ಶ್ರೀ ಕೃಷ್ಣ ಪಾರಿಜಾತ-ನರಕಾಸುರ ವಧೆ’ ನಡೆಯಲಿದೆ. ಫೆ.೨೪ರಂದು ಸಂಜೆ ೬.೩೦ರಿಂದ ಯಕ್ಷಗಾನ ಶ್ರೀ ಹನುಮಗಿರಿ ಮೇಳದಿಂದ ‘ಸಾಕೇತ ಸಾಮ್ರಾಜ್ಞಿ’ ನಡೆಯಲಿದೆ ಎಂದರು. ಡಾ.ಕೇದಾರ ಕೃಷ್ಣ ಪಾಣಾಜೆ ಉಪಸ್ಥಿತರಿದ್ದರು.