

ಪುತ್ತೂರು: ಹಿಂದು ಧರ್ಮ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ಹಿಂದು ಧರ್ಮ ಉಳಿಯಬೇಕಾದರೆ ಭಾರತದಲ್ಲಿರುವ ಎಲ್ಲ ಸಾಂಸ್ಕೃತಿಕ ಕಲೆಗಳು ಉಳಿಯಬೇಕು. ಧರ್ಮ ಸಂರಕ್ಷಣೆಗಾಗಿ ನಾವು ವಿವಿಧ ರೂಪದಲ್ಲಿ ತೊಡಗಿಸಕೊಳ್ಳಬಹುದು ಎಂದು ಹಿಂದು ಮುಖಂಡ ಕುಂಟಾರು ರವೀಶ್ ತಂತ್ರಿ ಹೇಳಿದರು.
ಪರ್ಲಡ್ಕದ ಎಸ್.ಡಿ.ಪಿ. ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ಆವರಣದಲ್ಲಿ ಸೋಮವಾರ ಎಸ್.ಡಿ.ಪಿ. ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ (ಆಯುರ್ವೇದ ಔಷಧ ತಯಾರಕರು) ವತಿಯಿಂದ ಎಸ್.ಡಿ.ಪಿ. ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ೨೧ನೇ ವರ್ಷದ ಕಲೋಪಾಸನಾ ೨೦೨೫ ಸಾಂಸ್ಕೃತಿಕ ಕಲಾ ಸಂಭ್ರಮದ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸದಾಚಾರವಂತರು ಶಕ್ತಿಯನ್ನು ಸದ್ವಿನಿಯೋಗ ಮಾಡಿಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಜತೆಗೆ ಆತ್ಮ ತೃಪ್ತಿಯನ್ನು ಗಳಿಸುತ್ತಾರೆ. ಕಳೆದ ೨೧ ವರ್ಷಗಳಿಂದ ನಡೆಯುತ್ತಿರುವ ಕಲೋಪಾಸನೆ ದೇವರನ್ನು ಸೇರಲಿರುವ ಮಾರ್ಗದಲ್ಲಿ ಒಂದಾಗಿದೆ. ಸಾಂಸ್ಕೃತಿಕವಾಗಿ ಕಲೆಗಳನ್ನು ಉಳಿಸು ಬೆಳೆಸುವ ಜತೆಗೆ ಕಲೋಪಾಸನಾ ನಿರಂತರವಾಗಿ ಪ್ರೋತ್ಸಾಹಿಸುವ ಕಾರ್ಯಕ್ರಮ ನಡೆಸುತ್ತಿರುವ ಡಾ. ಹರಿಕೃಷ್ಣ ಪಾಣಾಜೆ ತನ್ನ ಜೀವನವನ್ನು ಧರ್ಮ ಸಂರಕ್ಷಣೆಗೆ ವಿನಿಯೋಗಿಸುತ್ತಿದ್ದಾರೆ ಎಂದರು.
ಹನುಮಗಿರಿ ಕೋದಂಡರಾಮ ಕೃಪಾ ಪೋಷಿತ ಯಕ್ಷಗಾನ ಮಂಡಳಿಯವರಿಂದ ‘ಸಾಕೇತ ಸಾಮ್ರಾಜ್ಞೆ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಈ ಮೂಲಕ ಮೂರು ದಿನಗಳ ಕಾಲ ನಡೆದ ಸಾಂಸ್ಕೃತಿಕ ಕಲಾ ಸಂಭ್ರಮ ಸಂಪನ್ನಗೊಂಡಿತು.
ಎಸ್.ಡಿ.ಪಿ. ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ, ರೂಪಲೇಖಾ, ಸುಜಾತ ಪಿ.ಕೆ. ಉಪಸ್ಥಿತರಿದ್ದರು. ಮೇಘನಾ ಪಾಣಾಜೆ ಸ್ವಾಗತಿಸಿ, ವಂದಿಸಿದರು.