

ಕರಾವಳಿಯ ಗಂಡುಕಲೆಯಾಗಿರುವ ಯಕ್ಷಗಾನವು ನೃತ್ಯ, ಸಂಗೀತ, ಭಾವಾಭಿನಯ, ಅರ್ಥಗಾರಿಕೆ ಸೇರಿದಂತೆ ಎಲ್ಲ ಅಂಶಗಳನ್ನು ಒಳಗೊಂಡಿರುವ ಒಂದು ಪರಿಪೂರ್ಣ ಕಲೆಯಾಗಿದೆ. ಇಂತಹ ಕಲೆಯ ಸ್ವಾದವನ್ನು ಈ ಭಾಗದ ಕಲಾ ರಸಿಕರಿಗೆ ಉಣಬಡಿಸುತ್ತಿರುವುದು ಉತ್ತಮ ವಿಷಯ ಎಂದು ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಪ್ರಸನ್ನ ಎನ್.ಭಟ್ ಹೇಳಿದರು.
ಪರ್ಲಡ್ಕದ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ಆವರಣದಲ್ಲಿ ಭಾನುವಾರ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್(ಆಯುರ್ವೇದ ಔಷಧ ತಯಾರಕರು) ವತಿಯಿಂದ ಎಸ್‌ಡಿಪಿ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ೨೧ನೇ ವರ್ಷದ ಕಲೋಪಾಸನಾ ೨೦೨೫ ಸಾಂಸ್ಕೃತಿಕ ಕಲಾ ಸಂಭ್ರಮದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾಭಾರತ, ರಾಮಾಯಣ ಸೇರಿದಂತೆ ನಮ್ಮ ಶಾಸ್ತ್ರ ಪುರಾಣಗಳ ವಿಚಾರ ಮತ್ತು ಅಂಶಗಳನ್ನು ಹೊಂದಿರದ ಯಾವುದೇ ಕಲಾಪ್ರಕಾರಗಳು ನಮ್ಮಲ್ಲಿಲ್ಲ. ಭಾರತೀಯ ಕಲೆಗಳನ್ನು ಇಂದಿನ ಯುವಜನತೆಗೆ ತಲುಪಿಸುವ ಕಾರ್ಯವನ್ನು ಡಾ.ಹರಿಕೃಷ್ಣ ಪಾಣಾಜೆ ಮತ್ತು ಅವರ ಕುಟುಂಬಸ್ಥರು ಕಳೆದ ಹಲವಾರು ವರ್ಷಗಳಿಂದ ಮಾಡುತ್ತಿರುವುದು ಪ್ರಶಂಸಾರ್ಹ ವಿಚಾರ ಎಂದರು.
ಎಸ್‌ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ, ರೂಪಲೇಖಾ, ಮೇಘನಾ ಪಾಣಾಜೆ, ಸುಜಾತಾ ಪಿ.ಕೆ. ಉಪಸ್ಥಿತರಿದ್ದರು. ಬಳಿಕ ಶ್ರೀ ಮೆಕ್ಕೆಕಟ್ಟು ಮೇಳದವರಿಂದ ‘ಶ್ರೀಕೃಷ್ಣ ಪಾರಿಜಾತ-ನರಕಾಸುರ ವಧೆ’ ಯಕ್ಷಗಾನ ಪ್ರದರ್ಶನ ನಡೆಯಿತು.