ಭಕ್ತರ ಜಯ ಘೋಷದೊಂದಿಗೆ ಕಲ್ಮೇಶ್ವರ ರಥೋತ್ಸವ

11 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೆಲಗೇರಿಯ ಕಲ್ಮೇಶ್ವರ ದೇವರ 25ನೇ ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ಸಂಜೆ ಸಾವಿರಾರು ಜನ ಭಕ್ತರ ಹಷೋರ್ದ್ಘಾರದ ಮಧ್ಯೆ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಬೆಳಗ್ಗೆ 5 ಗಂಟೆಗೆ ಕಲ್ಮೇಶ್ವರ ಸ್ವಾಮಿಗೆ ದೇವಸ್ಥಾನ ಪ್ರಧಾನ ಅರ್ಚಕ ಬಸಯ್ಯ ಹಿರೇಮಠ ಅವರಿಂದ ರುದ್ರಾಭಿಷೇಕ, ಮಂಗಳಾರತಿ ಜರುಗಿತು. ಕೆಲಗೇರಿ ಹಾಗೂ ಸುತ್ತಲಿನ ಗ್ರಾಮಗಳ ಜನರು ಸಹ ಈ ಧಾಮಿರ್ಕ ಕಾರ್ಯದಲ್ಲಿ ಭಾಗವಹಿಸಿ ಕಲ್ಮೇಶ್ವರ ದೇವರ ದರ್ಶನ ಪಡೆದರು. ಮಧ್ಯಾಹ್ನ 12.30ಕ್ಕೆ ಅನ್ನಪ್ರಸಾದ ನಡೆಯಿತು.
ಸಂಜೆ 5ಕ್ಕೆ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ಧ ರಾಮೇಶ್ವರ ಸ್ವಾಮೀಜಿ ಹಸ್ತದಿಂದ, ಸಕಲ ವಾದ್ಯ ಮೇಳಗಳಿಂದ ಮಹಾರಥೋತ್ಸವ ಸಂಭ್ರಮದಿಂದ ಜರುಗಿತು. ನಿಂದರಕಿ ಮಠದ ಬಳಿಯ ಹಾದಿ ಬಸವಣ್ಣನ ವರೆಗೂ ರಥೋತ್ಸವ ಸಂಚರಿಸಿ ಮರಳಿ ಕಲ್ಮೇಶ್ವರ ದೇವಸ್ಥಾನಕ್ಕೆ ಮರಳಿತು.
ಮೆರವಣಿಗೆಯಲ್ಲಿ ಕುಂದಾಪುರದ ಚಂಡೆ, ಮಾಗಡಿಯ ಬ್ಯಾಂಡ್​ ಕಲಾ ತಂಡಗಳು ಭಕ್ತರ ಮನ ಸೆಳೆದವು. ರಾತ್ರಿ ಕೆಲಗೇರಿಯ ಸಿದ್ಧಲಿಂಗೇಶ್ವರ ನವ ತರುಣ ನಾಟ್ಯ ಸಂಘದಿಂದ ಆದರ್ಶ ಪ್ರೇಮ ಎಂಬ ಸಾಮಾಜಿಕ ನಾಟಕವು ಗ್ರಾಮದ ಸಮುದಾಯ ಭವನದಲ್ಲಿ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net