

ಕೊಪ್ಪಳ : ಪ್ರತಿಯೊಬ್ಬರೂ ಜೀವನದಲ್ಲಿ ಆಧ್ಯಾತ್ಮಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯ ಅಜ್ಜನವರು ಹೇಳಿದರು.
ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಶ್ರೀ ಕಲ್ಲಿನಾಥೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಲ್ಲಿನಾಥೇಶ್ವರನಿಗೆ ಮಹಾಗಣರಾಧನೆ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧ್ಯಾತ್ಮಕ್ಕೆ ತನ್ನದೇಯಾದ ಶಕ್ತಿ ಇದೆ. ಬದುಕಿನಲ್ಲಿ ನೆಮ್ಮದಿ ಕಾಣಲು ಸಂತ, ಶರಣರ ಕುರಿತು ತಿಳಿದುಕೊಳ್ಳಬೇಕು. ಮನುಷ್ಯ ಜೀವನದಲ್ಲಿ ಬದಲಾವಣೆ ಕಾಣಲು ಧಾರ್ಮಿಕತೆಯಲ್ಲಿ ನಂಬಿಕೆ ಇಡಬೇಕು. ಮಹಾತ್ಮರ ಪುರಾಣ, ಪ್ರವಚನಗಳನ್ನು ಆಲಿಸುವ ಮೂಲಕ ಜೀವನದಲ್ಲಿ ನೆಮ್ಮದಿ ಕಾಣಬೇಕು ಎಂದರು.
ಶ್ರೀಧರಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ ಆಲಿಕೆಯಿಂದ ಮನಪರಿವರ್ತನೆ ಆಗಲು ಸಾಧ್ಯ. ದಾನ ಧರ್ಮ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಯಾವಾಗಲೂ ಪರೋಪಕಾರ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಬೆಳಗ್ಗೆ ಕಲ್ಲಿನಾಥೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ ನಡೆಯಿತು. ಶ್ರೀ ಕಲ್ಲಯ್ಯ ಅಜ್ಜನವರು, ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಅಡ್ನೂರು-ರಾಜೂರ ಬೃಹನ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿಗಳಿಂದ ಲಿಂಗಪೂಜೆ ನಡೆಯಿತು.
ಈ ಸಂದರ್ಭ ಸಂಸ್ಥಾನ ಹಿರೇಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಕುದರಿಮೋತಿಯ ಶ್ರೀ ವಿಜಯ ಮಹಾಂತ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ನಾಗಯ್ಯ ಗುರುಮಠ, ಗ್ರಾಮದ ಮುಖಂಡರಾದ ಕಲ್ಲಯ್ಯ ಜಾರಗಡ್ಡಿಮಠ, ನೀಲಪ್ಪ ತೊಂಡಿಹಾಳ, ಅಮರೇಶ ಶೆಟ್ಟರ,ಕಲ್ಲಪ್ಪ ಕವಳಕೇರಿ, ಕಲ್ಲಪ್ಪ ಮೇಟಿ, ವರುಪಾಕ್ಷಪ್ಪ ಹೂಗಾರ, ಮೌನೇಶ ಪತ್ತಾರ, ಕಲ್ಲಪ್ಪ ತೊಡಿಹಾಳ, ಯಲ್ಲಪ್ಪ ಅಗಸಿಮನಿ, ಶರಣಪ್ಪ ಚಾಬಳ್ಳಿ, ಈರಪ್ಪ ಗುಡಸಲದ ಸೇರಿದಂತೆ ಮತ್ತಿತರರಿದ್ದರು.