

ಜಗಳೂರು: ತಾಲೂಕಿನ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಕಲ್ಲೇದೇವರಪುರ ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿಯ ಮಹಾರಥೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಒಂದು ವಾರದ ಕಾಲ ನಡೆಯುವ ಜಾತ್ರೆ ಹಿನ್ನೆಲೆ ಗ್ರಾಮದಲ್ಲಿ ಜನಸ್ತೋಮ ತುಂಬಿತ್ತು. ಮುಂಜಾನೆ ಸ್ವಾಮಿಗೆ ಧಾರ್ವಿುಕ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತ ಸಮುದಾಯ ಸರದಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆದರು. ಅಲ್ಲದೇ ದೂರದ ಊರುಗಳಿಂದ ಪಾದಯಾತ್ರೆ ಮೂಲಕ ಬಂದು ಹರಕೆ ತೀರಿಸಿದರು.
ತೇರು ಬೀದಿಯಲ್ಲಿ ಮಧ್ಯಾಹ್ನ 3 ಗಂಟೆಯಿಂದಲೇ ರಥೋತ್ಸವಕ್ಕಾಗಿ ಜನರು ಬಿಸಿಲನ್ನು ಲೆಕ್ಕಿಸದೇ ಕಾದು ನಿಂತಿದ್ದರು. ಸಂಜೆ 5 ಗಂಟೆಗೆ ಕಲ್ಲೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ಕರೆತಂದು ತೇರಿನ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕರ್ಪರದ ಆರತಿ ಬೆಳಗಿದರು. ನೆರೆದಿದ್ದ ಸಾವಿರಾರು ಭಕ್ತರು ತೇರಿನ ಗಾಲಿಗೆ ತೆಂಗಿನ ಕಾಯಿ ಒಡೆದು, ಕಳಸಕ್ಕೆ ಬಾಳೆಹಣ್ಣು ಎಸೆದರು. ತೇರು ಸಾಗುತ್ತಿದ್ದಂತೆ ದಾರಿಯುದ್ದಕ್ಕೂ ತಮಟೆ, ಡೊಳ್ಳು, ನಂದಿ ಧ್ವಜ ಕುಣಿತಕ್ಕೆ ಭಕ್ತರು ತಲೆಯಾಡಿಸಿದರು.
ಅಗಸನಕಟ್ಟೆ ಬಸವರಾಜ್ ಸ್ವಾಮಿಯ ಪಟ 1.90 ಲಕ್ಷ ರೂ. ಗಳಿಗೆ ಹರಾಜಾಯಿತು. ಚೈತ್ರಮಾಸ ಕೃಷ್ಣ ಪಕ್ಷ ಪಂಚಮಿ ಹುಣ್ಣಿಮೆಯ ಮೂಲ ನಕ್ಷತ್ರದಲ್ಲಿ ನಡೆಯುವ ರಥೋತ್ಸವಕ್ಕೆ ವಾರದಿಂದಲೂ ಗ್ರಾಮದಲ್ಲಿ ಸಕಲ ಸಿದ್ಧತೆಗಳು ನಡೆದಿತ್ತು.
ಶಾಸಕ ಬಿ. ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್, ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ, ದೇವಸ್ಥಾನದ ಧರ್ಮದರ್ಶಿ ಶರಣಪ್ಪ, ಮುಖಂಡರಾದ ಸಣ್ಣ ಸೂರಯ್ಯ, ಬಡಯ್ಯ, ತಿಪ್ಪೇಸ್ವಾಮಿ, ಮಹೇಶ್ ಸೇರಿ ಮತ್ತಿತರರಿದ್ದರು.
ಭಕ್ತರ ದಂಡು: ರಥೋತ್ಸವಕ್ಕೆ ದಾವಣಗೆರೆ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ಶಿವಮೊಗ್ಗ, ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಿಂದ ಮತ್ತು ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ಎತ್ತಿನಗಾಡಿ, ಆಟೋ, ಟ್ರ್ಯಾಕ್ಟರ್, ಕಾರು, ಬೈಕ್ಗಳ ಮೂಲಕ ಸಾವಿರಾರು ಭಕ್ತರು ಆಗಮಿಸಿದ್ದರು. ತೋರಣಗಟ್ಟೆ ರಸ್ತೆ, ದೊಣೆಹಳ್ಳಿ, ಚಳ್ಳಕೆರೆ ರಸ್ತೆಯುದ್ದಕ್ಕೂ ವಾಹನಗಳ ಸಾಲು ಕಂಡು ಬಂದಿತು. ಒಂದು ಕಿಮೀ ದೂರದವರೆಗೂ ವಾಹನಗಳ ನಿಲುಗಡೆಯಾಗಿದ್ದವು.