ಮನೆಯಿಂದ ಚಿನ್ನಾಭರಣ ಕಳವು

PTR_7 MAR_3
Published on

ವಿಟ್ಲ: ಕಬಕ ವಿಟ್ಲ ರಸ್ತೆಯ ಉರಿಮಜಲು ಸಮೀಪದ ಮನೆಯೊಂದರಿಂದ ಹಾಡು ಹಗಲೇ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ದೇವಸ್ಯ ಹೋಗುವ ರಸ್ತೆ ಸಮೀಪದ ನಿವಾಸಿ ಗಣೇಶ್ ಗೌಡ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಏಳೂವರೆ ಪವನ್ ಚಿನ್ನಾಭರಣ ದೋಚಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉರಿಮಜಲು ಪೆಂಟ್ರೋಲ್ ಪಂಪ್ ಮುಂಭಾಗದಲ್ಲಿ ಗೂಡಂಗಡಿ ನಡೆಸಿಕೊಂಡಿರುವ ಕುಟುಂಬ ಬೆಳಗ್ಗೆ ೮ಗಂಟೆಗೆ ಮನೆಯಿಂದ ತೆರಳುತ್ತಾರೆ. ಚಿನ್ನಾಭರಣವನ್ನು ಯಾವತ್ತೂ ಅಂಗಡಿಗೆ ಹೋಗುವ ಸಂದರ್ಭ ಜತೆಗೆ ತೆಗೆದುಕೊಂಡು ಹೋಗುತ್ತಿದ್ದವರು ಶುಕ್ರವಾರ ಮನೆಯಲ್ಲೇ ಬಿಟ್ಟು ತೆರಳಿದ್ದರು.

ಮನೆಯ ಮುಂಭಾಗ ಹಾಕಿ ಬೀಗವನ್ನು ಮುರಿದು ಕಳ್ಳರು ಒಳ ನುಸುಳಿ, ಮನೆಯಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹುಡುಕಾಡಿದ್ದಾರೆ. ಚಿನ್ನವನ್ನು ಬಟ್ಟೆಯಡಿಯಲ್ಲಿ ಭದ್ರವಾಗಿ ಇಟ್ಟುಹೋಗಿದ್ದರೂ, ಕಳ್ಳರು ಇದನ್ನು ಕೊಂಡೊಯ್ದಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net