

ಶಿರೋಳ: ಮನುಷ್ಯರ ಭವರೋಗ ಕಳೆಯುವ ವೈದ್ಯ ಎಂದೇ ಪ್ರಸಿದ್ಧಿಯಾಗಿರುವ ನರಗುಂದ ತಾಲೂಕಿನ ಕಲ್ಲಾಪೂರದ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಆ. 26ರಂದು ವಿಜೃಂಭಣೆಯಿಂದ ನಡೆಯಲಿದೆ.
ಬೆಳಗ್ಗೆ 6ಗಂಟೆಗೆ ರುದ್ರಾಭಿಷೇಕ, ಮಧ್ಯಾಹ್ನ ಮಹಾಪ್ರಸಾದ, ಸಾಯಂಕಾಲ 5 ಗಂಟೆಗೆ ಕರಡಿಮೇಳ, ಮುತ್ತೈದೆಯರಿಂದ ಆರತಿ ನಂದಿಕೋಲಿನ ಭವ್ಯಮೆರವಣಿಗೆ, ಹರ-ಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಮಹಾರಥೋತ್ಸವ ನೆರವೇರಲಿದೆ.
ದೇವಸ್ಥಾನ ಹಿನ್ನೆಲೆ
ಗ್ರಾಮದ ಶಿವಭಕ್ತ ಯಲ್ಲಪ್ಪಗೌಡರು ಹೊಲದಲ್ಲಿ ಎತ್ತುಗಳಿಂದ ರಂಟಿ ಹೊಡೆಯುತ್ತಿದ್ದರು. ಐದು ಸುತ್ತು ಆದ ನಂತರ ಎತ್ತುಗಳು ಸುಮ್ಮನೆ ನಿಂತವು. ಆಗ ಯಲ್ಲಪ್ಪಗೌಡರು ಜಾಗವನ್ನು ಪರಿಶೀಲಿಸಿ ನಿಧಿ ಇರಬಹುದು ಎಂದು ಪಂಚಾಯಿತಿ ಗಮನಕ್ಕೆ ತಂದರು. ಸ್ಥಳಕ್ಕೆ ಆಗಮಿಸಿದ ಪಂಚಾಯಿತಿಯವರು ಎತ್ತುಗಳು ನಿಂತ ಜಾಗ ಅಗೆದಾಗ ಬಸವಣ್ಣನ ವಿಗ್ರಹ ಕಾಣಿಸಿದೆ. ಈ ಸುದ್ದಿ ಊರಲ್ಲೆಲ್ಲ ಹಬ್ಬಿತು. ಬಳಿಕ ಪಂಡಿತರು, ಸ್ವಾಮೀಜಿಗಳು ವಿಶೇಷ ಪೂಜೆ ನೆರವೇರಿಸಿದರು. ಅಂದಿನಿಂದ ಈ ಭಾಗದ ಭಕ್ತರ ಆರಾಧ್ಯದೈವವಾಗಿ ಬಸವಣ್ಣ ಕಂಗೊಳಿಸತೊಡಗಿದ್ದಾನೆ. ಎತ್ತುಗಳನ್ನು ದೇವಸ್ಥಾನಕ್ಕೆ ಐದು ಪ್ರದಕ್ಷಿಣೆ ಹಾಕಿದರೆ ರೋಗ ನಿರೋಧಕ ಶಕ್ತಿ ಬರುತ್ತದೆ ಎಂಬ ಪ್ರತೀತಿ ಇದೆ. ಭವರೋಗ ವೈದ್ಯ ಬಸವಣ್ಣ ಬಟಕುರ್ಕಿಯ ದೇಸಾಯಿಯವರ ಕುಷ್ಟರೋಗ ನಿವಾರಣೆ, ಸರ್ಪ ಕಚ್ಚಿದಾಗ ಅಲ್ಲಿಯ ತೀರ್ಥ ಅಂಗಾರ ಹಚ್ಚಿದಾಗ ವಿಷದಿಂದ ಮುಕ್ತರಾದರು ಎಂಬ ಹೆಗ್ಗಳಿಕೆ ಹೊಂದಿದೆ.
ಶ್ರಾವಣ ಮಾಸದ ಐದು ಸೋಮವಾರ ವಿವಿಧ ಜಿಲ್ಲೆಗಳಿಂದ ರೈತರು ದೇವಸ್ಥಾನಕ್ಕೆ ಎತ್ತುಗಳನ್ನು ತಂದು ದೇವಸ್ಥಾನ ಸುತ್ತ ಐದು ಪ್ರದರ್ಶನ ಹಾಕಿಸುತ್ತಾರೆ.
ಪ್ರತಿ ಸೋಮವಾರ ಕಮತಗಿ ವಿಶ್ವನಾಥಯ್ಯ ಎಂಬುವವರು ದಾಸೋಹ ಕೈಗೊಳ್ಳುತ್ತಾರೆ. ಗ್ರಾಮದ ಹಿರೇಮಠದ ಸ್ವಾಮಿಗಳು ನಿತ್ಯ ಪೂಜೆ ಸಲ್ಲಿಸುತ್ತಾರೆ. ಅರ್ಚಕರಾದ ಪೂಜಾರ ಮನೆತನದವರ ಸೇವೆ ಸ್ಮರಣೀಯ. ಭಕ್ತರ ವಸತಿಗೆ ಯಾತ್ರಾ ನಿವಾಸ ಅವಶ್ಯಕತೆ ಇದೆ. ಗ್ರಾಮದ ಬಸವೇಶ್ವರ ಸೇವಾ ಸಮಿತಿ ಕ್ರಿಯಾಶೀಲವಾಗಿದ್ದು, ದೇವಸ್ಥಾನದ ಕಾರ್ಯಗಳಿಗೆ ಸನ್ನದ್ಧರಾಗಿರುತ್ತಾರೆ. ಸ್ಥಳೀಯ ಹಾಗೂ ಸುತ್ತಮತ್ತಲಿನ ಗ್ರಾಮಸ್ಥರ ಸಹಕಾರದಿಂದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿವೆ.ಯಲಪ್ಪಗೌಡ ಶಿವಾಪೂರ, ದೇವಸ್ಥಾನ ಟ್ರಸ್ಟ್ ಕಮಿಟಿ