ಲಾರಿ ಡಿಕ್ಕಿಯಾಗಿ ಕಾರಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

11 smg 4
Published on

ಶಿವಮೊಗ್ಗ: ತಾಲೂಕಿನ ಕುಂಚೇನಹಳ್ಳಿ ಸಮೀಪದ ಕಲ್ಲಾಪುರದಲ್ಲಿ ಭಾನುವಾರ ಬೆಳಗಿನ ಜಾವ ಲಾಂಗ್ ಡ್ರೈವ್‌ಗೆಂದು ತಡರಾತ್ರಿ ದಾವಣಗೆರೆಯಿಂದ ಹೊರಟು ಶಿವಮೊಗ್ಗದಲ್ಲಿ ಉಪಾಹಾರ ಸೇವಿಸಲು ಬರುತ್ತಿದ್ದಾಗ ಭೀಕರ ರಸ್ತೆ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿವಮೊಗ್ಗದ ಮೋಹನ್ (22), ದಾವಣಗೆರೆಯ ಕಾರ್ತಿಕ್(23) ಮತ್ತು ವಿವೇಕ್ (21) ಮೃತರು. ದಾವಣಗೆರೆಯ ರುದ್ರೇಶ್ ಪಟೇಲ್ ಗಾಯಗೊಂಡಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾವಣಗೆರೆಯ ಬಿಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ತಿಕ್ ದ್ವಿತೀಯ ವರ್ಷದ ಐಎಸ್(ಇನ್‌ಫಾರ್ಮೆಶನ್ ಸೈನ್ಸ್), ಮೋಹನ್ ದ್ವಿತೀಯ ವರ್ಷದ ಬಿಸಿಎ ಮತ್ತು ರುದ್ರೇಶ್ ಪಟೇಲ್ ಮೊದಲ ವರ್ಷದ ಸಿವಿಲ್ ಇಂಜಿನಿಯರಿಂಗ್ ಮಾಡಿಕೊಂಡಿದ್ದಾರೆ. ಮತ್ತೊಬ್ಬ ವಿವೇಕ್ ದಾವಣಗೆರೆ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದರು. ನಾಲ್ವರು ಶನಿವಾರ ರಾತ್ರಿ ದಾವಣಗೆರೆಯಿಂದ ಹೊನ್ನಾಳಿ, ನ್ಯಾಮತಿ ಮಾರ್ಗವಾಗಿ ಶಿವಮೊಗ್ಗದತ್ತ ಹೊರಟಿದ್ದಾರೆ. ಕಾರ್ತಿಕ್ ಕಾರು ಓಡಿಸುತ್ತಿದ್ದು ಸವಳಂಗದಲ್ಲಿ ತಡರಾತ್ರಿ ರಸ್ತೆ ಬದಿ ನಿಲ್ಲಿಸಿ ನಿದ್ರೆಗೆ ಜಾರಿದ್ದಾರೆ. ಅಲ್ಲಿಂದ ಬೆಳಗಿನ ಜಾವ ಶಿವಮೊಗ್ಗಕ್ಕೆ ಹೊರಟು ಉಪಾಹಾರ ಸೇವಿಸಲು ನಿರ್ಧರಿಸಿದ್ದು ಅಲ್ಲಿಂದ ಪ್ರಯಾಣಿಸಿದ್ದಾರೆ.

ಮೊದಲೇ ನಿದ್ರೆ ಮಂಪರಿನಲ್ಲಿದ್ದ ಕಾರ್ತಿಕ್ ಕಾರು ಚಾಲನೆ ಮುಂದುವರಿಸಿದ್ದು ಕುಂಚೇನಹಳ್ಳಿ ಸಮೀಪದ ಕಲ್ಲಾಪುರದಲ್ಲಿ ಎದುರಿನಿಂದ ಬರುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಕಾರ್ತಿಕ್, ವಿವೇಕ್ ಮತ್ತು ಮೋಹನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ದಾರಿಹೋಕರು ಗಂಭಿರವಾಗಿ ಗಾಯಗೊಂಡಿದ್ದ ರುದ್ರೇಶ್‌ನನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲಿಸಿ ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಲಾರಿ ಚಾಲಕನನ್ನು ವಶಕ್ಕೆ ಪಡೆದಿರುವ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net