ಕಲ್ಲಡ್ಕ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ : ಬಹುದಿನಗಳ ಬೇಡಿಕೆ ಈಡೇರಿಕೆ : ಟ್ರಾಫಿಕ್ ಜಾಂ ಕಿರಿಕಿರಿಗೆ ಮುಕ್ತಿ

New Project (43)
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಭಾಗವಾಗಿ ಕಲ್ಲಡ್ಕದಲ್ಲಿ ನಿರ್ಮಾಣಗೊಂಡಿರುವ ಮೇಲ್ಸೇತುವೆ ಸೋಮವಾರದಿಂದ ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಈ ಮೂಲಕ ಕಲ್ಲಡ್ಕದಲ್ಲಿ ಕಳೆದ ಹಲವು ಸಮಯಗಳಿಂದ ವಾಹನ ಚಾಲಕರು, ಪ್ರಯಾಣಿಕರು ಅನುಭವಿಸುತ್ತಿದ ಟ್ರಾಫಿಕ್ ಜಾಂ, ಕೆಸರು, ಧೂಳಿನ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ.

ಕಲ್ಲಡ್ಕದ ಮೇಲ್ಸೇತುವೆ 2.1 ಕಿ.ಮೀ. ಉದ್ದವಿದ್ದು, ಕರಾವಳಿಯ ಅತ್ಯಂತ ಉದ್ದದ ಫ್ಲೈಓವರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೆಲ್ಕಾರಿನ ಬೋಳಂಗಡಿಯಿಂದ ಕಲ್ಲಡ್ಕದ ಪೂರ್ಲಿಪ್ಪಾಡಿವರೆಗೆ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಕೆಲದಿನಗಳಿಂದ ಸುರಿದ ಮಳೆಯಿಂದಾಗಿ ಹೆದ್ದಾರಿ ಅವ್ಯವಸ್ಥೆಯ ಆಗರವಾಗಿತ್ತು. ಸಂಸದ ಕ್ಯಾ.ಬ್ರಿಜೇಶ್ ಚೌಟ ಎನ್‌ಎಚ್‌ಎಐ ಹಾಗೂ ಗುತ್ತಿಗೆ ಸಂಸ್ಥೆ ಕೆಎನ್‌ಆರ್‌ಸಿ ಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರ ಸಂಚಾರಕ್ಕೆ ತೆರವುಗೊಳಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜೂನ್ 2ರಿಂದ ವಾಹನ ಸಂಚಾರಕ್ಕೆ ಅವಕಾಶ ನೀಡುವುದಾಗಿ ತಿಳಿಸಿದ್ದರು. ಅಂತೆಯೇ ಬಹುದಿನಗಳ ನಿರೀಕ್ಷೆಯಾಗಿದ್ದ ಮೇಲ್ಸೇತುವೆ ಪ್ರಯಾಣಕ್ಕೆ ತೆರೆದುಕೊಂಡಿದ್ದು ಪ್ರಾಯೋಗಿಕವಾಗಿ ಒಂದು ಭಾಗದಿಂದ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಒಂದು ಹಂತದ ಸಮಸ್ಯೆಗೆ ಪರಿಹಾರ

ಕಲ್ಲಡ್ಕದಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ 2021ರಿಂದ ಆರಂಭಗೊಂಡಿದ್ದು, ಅಂದಿನಿಂದ ಇಂದಿನವರೆಗೆ ಕಲ್ಲಡ್ಕ ಭಾಗದ ಜನತೆ ಒಂದಲ್ಲ ಒಂದು ಸಮಸ್ಯೆ ಅನುಭವಿಸುತ್ತಿದ್ದರು. ಬೇಸಿಗೆಯಲ್ಲಿ ಧೂಳಿನ ಸಮಸ್ಯೆಯಾದರೆ ಮಳೆಗಾಲದಲ್ಲಿ ಕೆಸರಿನ ಸಮಸ್ಯೆಯಿಂದ ಬಳಲಿ ಹೋಗಿದ್ದರು. ಒಂದೊಮ್ಮೆ ಮೇಲ್ಸೇತುವೆ ಕಾಮಗಾರಿ ನಡೆಯುವ ವೇಳೆ ಕಬ್ಬಿಣದ ರಾಡ್‌ಗಳು ಬಿದ್ದು ಅವಾಂತರ ಉಂಟಾಗಿದ್ದರೆ, ಕಾಮಗಾರಿ ವೇಳೆ ಕ್ರೇನ್‌ಗಳು ರಸ್ತೆಯಲ್ಲಿ ತಿರುಗಾಡುವುದರಿಂದ ವಾಹನಗಳ ಸರಾಗ ಸಂಚಾರಕ್ಕೂ ಅಡ್ಡಿಯಾಗುತ್ತಿತು. ಮಂಗಳೂರು- ಬೆಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿರುವುದರಿಂದ ನಿತ್ಯ ವಾಹನ ದಟ್ಟಣೆಯಿದ್ದು, ಟ್ರಾಫಿಕ್ ಜಾಂನಿಂದಾಗಿ ವಾಹನ ಚಾಲಕರು ಪರ್ಯಾಯ ರಸ್ತೆಯ ಹುಡಕಾಟ ಮಾಡುತ್ತಿದ್ದರು. ಇದೀಗ ಮೇಲ್ಸೇತುವೆ ವಾಹನ ಸಂಚಾರಕ್ಕೆ ತೆರೆದುಕೊಂಡಿರುವುದರಿಂದ ಒಂದು ಹಂತದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net