

ಮಂಗಳೂರು : ಮಳೆಗಾಲ ನಿರೀಕ್ಷೆಗೂ ಮೊದಲೇ ಪ್ರಾರಂಭವಾಗಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ
ಬಿ.ಸಿ ರೋಡ್-ಅಡ್ಡಹೊಳೆ ಚತುಷ್ಪಥ ಕಾಮಗಾರಿ ಅಂತಿಮ ಹಂತದ ಪ್ರಗತಿಯಲ್ಲಿದೆ. ಸಾರ್ವಜನಿಕರಿಗೆ
ತೊಂದರೆಯಾಗದಂತೆ ಕಲ್ಲಡ್ಕ ಫ್ಲೈ ಓವರ್ ಸಹಿತ ಕೆಲವೆಡೆ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆ ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿರುವುದಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಬುಧವಾರದಿಂದ (ಮೇ. 29) ಹೆದ್ದಾರಿ ಪ್ರಾಧಿಕಾರವು ಮಾಣಿ ಹಾಗೂ ಉಪ್ಪಿನಂಗಡಿ ಬಳಿಯ ವೆಹಿಕಲ್ ಅಂಡರ್ ಪಾಸ್
(ವಿಯುಪಿ) ದ್ವಿ ಪಥವನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ. ಜೂ. 2ರಿಂದ ಕಲ್ಲಡ್ಕ ಪೇಟೆಯ ಮೇಲು ರಸ್ತೆ(ಫ್ಲೈಓವರ್)ಯಲ್ಲಿ
ಎಡಭಾಗವನ್ನು ವಾಹನಗಳ ಸಂಚಾರಕ್ಕೆ ತೆರವುಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮುಂಗಾರು ಚುರುಕುಗೊಂಡಿರುವ ಕಾರಣ ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ
ಅಡ್ಡಿಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಎಲ್ಲೆಲ್ಲಿ ಕಾಮಗಾರಿಯಿಂದ ವಾಹನಗಳ ಸಂಚಾರಕ್ಕೆ ತೊಂದರೆ ಎದುರಾಗಿದೆಯೋ ಅಲ್ಲಿನ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಜನರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ
ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತುಂಬೆಯಲ್ಲಿ ನೀರು ನಿಲ್ಲುವ ಸಮಸ್ಯೆಗೆ ಪರಿಹಾರವಾಗಿ
ಪೈಪ್ ಕಲ್ವರ್ಟ್ ಅಳವಡಿಸಿದ್ದು, ಕಾಮಗಾರಿ ಪೂರ್ಣಗೊಂಡರೆ ಇಲ್ಲಿಯೂ ಮಳೆಗಾಲದಲ್ಲಿ ವಾಹನಗಳ ಸಂಚಾರಕ್ಕೆ ಯಾವುದೇ
ತೊಂದರೆಯಾಗುವುದಿಲ್ಲ ಎಂದು ಕ್ಯಾ. ಚೌಟ ತಿಳಿಸಿದ್ದಾರೆ.
ಸದ್ಯ ಸರ್ವಪಕ್ಷದ ನಿಯೋಗದಲ್ಲಿ ವಿದೇಶದಲ್ಲಿರುವ ಕ್ಯಾ. ಚೌಟ ಅವರು ಮಳೆಗಾಲ ಪ್ರಾರಂಭವಾಗಿರುವ ಕಾರಣ ಬಿ.ಸಿ.ರೋಡ್-
ಅಡ್ಡಹೊಳೆ ಹೆದ್ದಾರಿಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇರಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಬಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿಗಳಿಂದ ಎಲ್ಲೆಲ್ಲಿ
ತೊಂದರೆಯಾಗುತ್ತಿದೆ ಎಂಬ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದು ತುರ್ತಾಗಿ ಸ್ಪಂದಿಸುವುದಕ್ಕೆ ಸೂಚನೆ ನೀಡಿದ್ದಾರೆ.