ಪುರಾತನ ಕಲ್ಲಚ್ಚು ಚಿತ್ರಗಳ ಪ್ರದರ್ಶನ ಮೇ 17ರಿಂದ

Dr.Kiran Acharya
ಭಾರತದ ಬೆಂಕಿಪೊಟ್ಟಣದಲ್ಲಿ ಕಲ್ಲಚ್ಚು ಚಿತ್ರಕಲೆ ಇರುವುದನ್ನು ತೋರಿಸುತ್ತಿರುವ ಅದಿತಿ ಗ್ಯಾಲರಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಕಿರಣ ಆಚಾರ್ಯ. ನಿರ್ದೇಶಕ ವಿ.ಶ್ರೀನಿವಾಸ್​ ಇದ್ದರು.
Published on

ಡಾ. ಕಿರಣ್​ ಆಚಾರ್ಯ ಮಾಹಿತಿ | ಕಲಾಕೃತಿಗಳ ಸಂರಕ್ಷಣೆ, ದಾಖಲೀಕರಣ ಉದ್ದೇಶ

ಉಡುಪಿ: ಕಲ್ಲಚ್ಚು ಚಿತ್ರಗಳ ರಚನೆ ಪುರಾತನ ಮುದ್ರಣ ತಂತ್ರಗಾರಿಕೆಯಾಗಿದ್ದು ಕಲ್ಲಿನ ಮೇಲೆ ಚಿತ್ರಿಸಿ, ಅದರ ಮೂಲಕ ಚಿತ್ರ ಪ್ರತಿ ತೆಗೆಯುವ ವಿಶಿಷ್ಟ ಕಲೆಯಾಗಿದೆ. ಈ ಕಲೆಯನ್ನು ಪ್ರಚುರ ಪಡಿಸಲು ಮೇ 17ರಂದು ಬೆಳಗ್ಗೆ 10:30ಕ್ಕೆ ಉಡುಪಿಯ ಅದಿತಿ ಗ್ಯಾಲರಿಯಲ್ಲಿ 'ಕಲ್ಲಚ್ಚು' ಚಿತ್ರ ಪ್ರದರ್ಶನ ಆಯೋಜಿಸಲಾಗಿದೆ ಎಂದು ಅದಿತಿ ಗ್ಯಾಲರಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಕಿರಣ್​ ಆಚಾರ್ಯ ಮಾಹಿತಿ ನೀಡಿದರು.

ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಅದಿತಿ ಗ್ಯಾಲರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1890ರಿಂದ 1930ರ ಅವಧಿಯಲ್ಲಿ ಕಲಚ್ಚಿನಲ್ಲಿ ಅರಳಿದ ದೈವೀ ಕಲೆಗಳ ಆಗರವಿರುವ ಚಿತ್ರ ಪ್ರದರ್ಶನ ಇದಾಗಿದೆ ಎಂದು ತಿಳಿಸಿದರು.

ಮೂರು ದಿನ ಪ್ರದರ್ಶನ

ಮಂಗಳೂರಿನ ಉದ್ಯಮಿ, ಪ್ರಿಂಟ್​ ಮೇಕರ್​ ನೇಮಿರಾಜ್​ ಶೆಟ್ಟಿ ಉದ್ಘಾಟಿಸಲಿದ್ದು, ಖ್ಯಾತ ಕಾವಿ ಕಲಾವಿದ ಡಾ. ಜನಾರ್ದನ್​ ರಾವ್​ ಹಾವಂಜೆ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮೇ 17ರಿಂದ 19ರ ವರೆಗೆ ಬೆಳಗ್ಗೆ 11ರಿಂದ ಸಂಜೆ 7 ಗಂಟೆ ವರೆಗೆ ಪ್ರದರ್ಶನ ವೀಕ್ಷಣೆಗೆ ಮುಕ್ತ ಅವಕಾಶವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅದಿತಿ ಗ್ಯಾಲರಿಯ ನಿರ್ದೇಶಕ ವಿ.ಶ್ರೀನಿವಾಸ್​, ಛಾಯಾಗ್ರಾಹಕ ಆಸ್ಟ್ರೊ ಮೋಹನ್​, ಪ್ರವೀಣಾ ಮೋಹನ್​ ಇದ್ದರು.

ಸಂಸ್ಕೃತಿ ಸಂರಕ್ಷಣೆಯ ಉದ್ದೇಶ

ಪ್ರಮುಖವಾಗಿ ರವಿವರ್ಮ ಚಿತ್ರಿಸಿರುವ ಹಾಗೂ ಆತನ ನಂತರದ ಖ್ಯಾತ ಕಲಾವಿದರು ರಚಿಸಿರುವ 168ಕ್ಕೂ ಹೆಚ್ಚು ಕಲ್ಲಚ್ಚು ಚಿತ್ರಗಳು ಪ್ರದರ್ಶನದಲ್ಲಿ ಇರಲಿದೆ. ಪ್ರತಿ ದಶಕದಲ್ಲಿ ಚಿತ್ರಕಲೆಯ ರಚನೆಯಲ್ಲಿ ಬದಲಾವಣೆ ಆಗುತ್ತಿರುತ್ತವೆ. ಕಲ್ಲಚ್ಚು ಮುದ್ರಣ ವಿಧಾನ ದೇವ-ದೇವತೆಯರ ಚಿತ್ರಗಳಾಗಿದ್ದು, ನಮ್ಮ ಸಂಸ್ಕೃತಿಯಲ್ಲಿ ಕಲೆಯೂ ಸಹ ಪುರಾತನ ಜನಪದ ಮೂಲದಲ್ಲಿ ಹುಟ್ಟಿದೆ. ವರ್ಣಭರಿತ ಹಾಗೂ ಸಾಂಪ್ರದಾಯಿಕ ಕಲಾಕೃತಿಗಳ ಸಂರಕ್ಷಣೆ, ಅಧ್ಯಯನ ಹಾಗೂ ದಾಖಲೀಕರಣದ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗುತ್ತಿದೆ ಎಂದು ಡಾ. ಕಿರಣ್​ ಆಚಾರ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net