ಕರೊನಾ ದಿಗ್ಬಂಧನ ಕಳ್ಳಭಟ್ಟಿ ಲಾಕ್ ಓಪನ್: ರಾಜ್ಯದಲ್ಲಿ ಮದ್ಯದಂಗಡಿ ಬಂದ್ ಬಳಿಕ ಹೆಚ್ಚಿದ ಸಾರಾಯಿ ಘಾಟು

Kallabhatti
Published on

ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದಾಗಿ ಮದ್ಯದಂಗಡಿಗಳು ಬಾಗಿಲು ಮುಚ್ಚಿದ ಬಳಿಕ ರಾಜ್ಯದ ಹಲವೆಡೆ ಕಳ್ಳಭಟ್ಟಿ ಮತ್ತು ಸಾರಾಯಿ ಘಾಟು ಮೂಗಿಗೆ ಬಡಿಯಲಾರಂಭಿಸಿದೆ. ಮದ್ಯ ಸಿಗದೆ ಪರದಾಡುತ್ತಿರುವ ವ್ಯಸನಿಗಳು ಬೇರೆ ದಾರಿ ಕಾಣದೆ ನಶೆ ಏರಿಸಿಕೊಳ್ಳಲು ಈ ವಿಷದ ಮೊರೆ ಹೋಗುತ್ತಿದ್ದಾರೆ. ಏ.14ರವರೆಗೆ ಲಾಕ್​ಡೌನ್ ಜಾರಿಯಲ್ಲಿರುವುದರಿಂದ ರಾಜ್ಯಾದ್ಯಂತ ಮದ್ಯದಂಗಡಿಗಳು ಬಂದ್ ಆಗಿದ್ದು, ಈ ಸಂದರ್ಭವನ್ನೇ ಕಾಯುತ್ತಿದ್ದ ದಂಧೆಕೋರರು ಕೈಚಳಕ ಆರಂಭಿಸಿದ್ದಾರೆ. ಮಾ.24ರಿಂದ ಏ.4ರವರೆಗೆ ರಾಜ್ಯದ ಹಲವೆಡೆ ನೂರಾರು ಪ್ರಕರಣಗಳು ದಾಖಲಾಗಿವೆ. ಕಳ್ಳಭಟ್ಟಿ ಕೇಂದ್ರಗಳ ಮೇಲೆ ನಡೆದ ದಾಳಿಯಲ್ಲಿ ಕಳ್ಳಭಟ್ಟಿ ಜತೆಗೆ ಅದಕ್ಕೆ ಬಳಸುವ ಇತರ ವಸ್ತುಗಳನ್ನು ವಶಪಡಿಸಿಕೊಂಡು ನೂರಾರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅನುಮತಿ ಇಲ್ಲದಿದ್ದರೂ ಕೆಲವೆಡೆ ಕಿರಾಣಿ ಅಂಗಡಿಗಳಲ್ಲಿ ಕಳಭಟ್ಟಿ ಮಾರಾಟ ಮಾಡಲಾಗುತ್ತಿದೆ.

ಒಂದು ಕ್ವಾರ್ಟರ್ ಕಳ್ಳಭಟ್ಟಿಯನ್ನು 100ರೂ. ನಿಂದ 300 ರೂ.ವರೆಗೆ ಮಾರಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಮದ್ಯ ಸಿಗದಿರುವ ಹಿನ್ನೆಲೆಯಲ್ಲಿ ಕೆಲವರು ಹೊರವಲಯ, ಹಳ್ಳಿಗಳಿಗೆ ಹೋಗಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟವರಿಗೆ ಹೆಚ್ಚು ಬೆಲೆ ಕೊಟ್ಟು ಕುಡಿದು ಬರುತ್ತಿದ್ದಾರೆ.

ಕಳೆದ 10 ದಿನಗಳಿಂದ ಲಾಕ್​ಡೌನ್​ನಿಂದಾಗಿ ಮದ್ಯ ಸಿಗದೆ ರಾಜ್ಯದಲ್ಲಿ 22 ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದಲ್ಲಿ ಮಾತ್ರವೇ ವ್ಯಸನಿಗಳಿಗೆ ವೈದ್ಯರ ಸಲಹೆ ಮೇರೆಗೆ ಮದ್ಯ ನೀಡಲಾಗುತ್ತಿದೆ. ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. | ಎಚ್.ನಾಗೇಶ್ ಅಬಕಾರಿ ಸಚಿವ

ನೀರಾಗೂ ಹೆಚ್ಚಿದ ಬೇಡಿಕೆ

ಮತ್ತೊಂದೆಡೆ ತೆಂಗಿನ ಮರದಿಂದ ತಯಾರಿಸುವ ನೀರಾಕ್ಕೂ ಭರ್ಜರಿ ಬೇಡಿಕೆ ಕಂಡು ಬಂದಿದೆ. ಮಂಡ್ಯ, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ತುಮಕೂರು ಮತ್ತಿತರರ ಜಿಲ್ಲೆಗಳಲ್ಲಿ ಲೀಟರ್​ಗೆ 40 ರೂ. ಇದ್ದ ನೀರಾ ಈಗ 100-200 ರೂ.ಗೆ ಮಾರಾಟವಾಗುತ್ತಿದೆ. ಒಂದು ಮರದಲ್ಲಿ ಸರಾಸರಿ 12 ಪುಪ್ಪಗುಚ್ಛ(ಹೊಂಬಾಳೆ) ಬರುತ್ತದೆ. ಕನಿಷ್ಠ ಮೂರು ಬಳಸಿದರೆ 1.5ರಿಂದ 3 ಲೀಟರ್ ನೀರಾ ತೆಗೆಯಬಹುದು ಎನ್ನುತ್ತಾರೆ ವ್ಯಾಪಾರಿಗಳು.

ರಾಜ್ಯಾದ್ಯಂತ ದಂಧೆ

ಹಾಸನದಲ್ಲಿ 15 ರಿಂದ 20 ರೂ.ಗೆ ದೊರೆಯುತ್ತಿದ್ದ 300 ಎಂಎಲ್ ಸೇಂದಿ ಪ್ರಸ್ತುತ 60 ರೂ.ಗೆ ತಲುಪಿದೆ. ಸೇಂದಿ ಇಳಿಸುವುದು ಕಷ್ಟ ಎಂದು ಕೈಬಿಟ್ಟಿದ್ದ ಜನರು ಈಗ ಮಡಕೆ ಕಟ್ಟಲಾರಂಭಿಸಿದ್ದಾರೆ. ಅಕ್ರಮ ಮದ್ಯ ಮಾರಾಟವೂ ನಡೆಯುತ್ತಿದ್ದು ಹಾಸನದ ಕ್ವಾಲಿಟಿ ಬಾರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 282 ಕಡೆ ದಾಳಿ ನಡೆಸಲಾಗಿದ್ದು, 33 ಸಾವಿರ ರೂ. ಮೌಲ್ಯದ 5.30 ಲೀಟರ್ ಮದ್ಯ, 40 ಲೀಟರ್ ಸೇಂದಿ ವಶಪಡಿಸಿಕೊಳ್ಳಲಾಗಿದೆ. ಕಳ್ಳಭಟ್ಟಿ ನಡೆಯದಂತೆ ತಡೆಗಟ್ಟಲು 13 ತಂಡಗಳು ಮೂರು ಪಾಳಿಯಲ್ಲಿ ಗಸ್ತು ನಡೆಸುತ್ತಿವೆ ಎಂದು ಅಬಕಾರಿ ಉಪ ಆಯುಕ್ತ ಕೆ.ಎಸ್.ಮುರಳಿ ವಿಜಯವಾಣಿಗೆ ತಿಳಿಸಿದ್ದಾರೆ.

ಉಡುಪಿ ನಗರದಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ತಯಾರಿ ಮಾಡುತಿದ್ದ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 1.50 ಲೀಟರ್ ಕಳ್ಳಭಟ್ಟಿ, ಕಾರು ಸಹಿತ ವಶಪಡಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆ ಕಲ್ಲೋನಿ ಎಂಬಲ್ಲಿ 115 ಲೀಟರ್ ಗೇರು ಹಣ್ಣಿನ ಹುಳಿ ರಸ ಹಾಗೂ ಒಂದೂವರೆ ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಮಾರ್ಚ್​ನಿಂದ ಏ.4ರ ವರೆಗೆ 114 ಪ್ರಕರಣಗಳನ್ನು ದಾಖಲಿಸಿ 74 ಜನರನ್ನು ಬಂಧಿಸಿದ್ದಾರೆ. 548.9 ಲೀಟರ್ ಕಳ್ಳಭಟ್ಟಿ ಮತ್ತು 429 ಲೀಟರ್ ಹೊರ ರಾಜ್ಯಗಳ ಮದ್ಯ ಜಪ್ತಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಕಳ್ಳಭಟ್ಟಿಯ 5 ಪ್ರಕರಣಗಳು ದಾಖಲಾಗಿವೆ. ಇಬ್ಬರನ್ನು ಬಂಧಿಸಿ, ಮದ್ಯ ತಯಾರಿಕೆಗೆ ಬಳಸುವ ಸಾವಿರಾರು ಲೀಟರ್ ಸರಕು ವಶಪಡಿಸಿಕೊಳ್ಳಲಾಗಿದೆ. ಸೆಟ್ಲಮೆಂಟ್ ಪ್ರದೇಶದಲ್ಲಿ ಮದ್ಯಸಾರ ಸಾಗಾಟ ಮಾಡುತ್ತಿದ್ದವರಿಂದ 33.3 ಲೀಟರ್ ಸರಕು ವಶಪಡಿಸಿಕೊಳ್ಳಲಾಗಿದೆ. ಅಣ್ಣಿಗೇರಿ ಸಮೀಪದಲ್ಲಿ ಸರ್ಕಾರಿ ಜಮೀನಿನಲ್ಲಿ ಕೊಳೆಯಲು ಬಿಡಲಾಗಿದ್ದ ಬೆಲ್ಲದ ಕೊಳೆ ವಶಪಡಿಸಿಕೊಳ್ಳಲಾಗಿದೆ ಎಂದು ಧಾರವಾಡ ಅಬಕಾರಿ ಉಪಾಧೀಕ್ಷಕ ಮಂಜುನಾಥ ಅರೆಗುಳಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮತ್ತು ಸಿದ್ದಾಪುರದಲ್ಲಿ ಕಳ್ಳಭಟ್ಟಿ ಮಾರಾಟ ಮಾಡಲು ಹೋಗಿದ್ದ ನಾಲ್ವರನ್ನು ಬಂಧಿಸಿ ಹನ್ನೆರಡು ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಳ್ಳಲಾಗಿದೆ. ಗದುಗಿನ ಮುಂಡರಗಿ ಮತ್ತು ರೋಣ ತಾಲೂಕಿನಲ್ಲಿ ಸಹ ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ. ರಾಯಚೂರು ಜಿಲ್ಲೆಯ ಗ್ರಾಮಾಂತರ ಪ್ರದೇಶದ ತಾಂಡಾಗಳಲ್ಲಿ ಕಳ್ಳಭಟ್ಟಿ ಮಾರಾಟ ನಡೆಯುತ್ತಿದೆ.

ಶಿವಮೊಗ್ಗದಲ್ಲಿ ಲೀಟರ್ ಕಳ್ಳಭಟ್ಟಿ ಬೆಲೆ 800 ರಿಂದ ಒಂದು ಸಾವಿರ ರೂ. ತಲುಪಿದೆ. ಸಾಗರ, ಹೊಸನಗರ, ಸೊರಬ, ತೀರ್ಥಹಳ್ಳಿ, ಶಿಕಾರಿಪುರ ಮತ್ತು ಶಿವಮೊಗ್ಗ ತಾಲೂಕಿನಲ್ಲಿ ಕಳ್ಳಭಟ್ಟಿ ಕಿಕ್ ಮಿತಿ ಮೀರಿದೆ. ಸೊರಬ, ಶಿಕಾರಿಪುರ ಮತ್ತು ಶಿವಮೊಗ್ಗ ಗ್ರಾಮೀಣ ಭಾಗದಲ್ಲಿರುವ ತಾಂಡಗಳಲ್ಲಿ ಹೆಚ್ಚು ಕಳ್ಳಭಟ್ಟಿ ವಹಿವಾಟು ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net