ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ‘ಕಲಿಕಾಮೃತ’

sslc student
Published on
  • ಮೈಸೂರು ದಕ್ಷಿಣ ವಲಯದಲ್ಲಿ ಪ್ರಯೋಗ
  • ಕಲಿಕೆಯಲ್ಲಿ ಹಿಂದುಳಿದ 600 ವಿದ್ಯಾರ್ಥಿಗಳು ಭಾಗಿ

ಸದೇಶ್ ಕಾರ್ಮಾಡ್ ಮೈಸೂರು

ಎಸ್ಸೆಸ್ಸೆಲ್ಸಿ ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಮಹತ್ವದ ಘಟ್ಟ. ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣಗೊಂಡರೆ ವಿದ್ಯಾರ್ಥಿಯ ಭವಿಷ್ಯವೇ ಮಂಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು ಎಂಬ ಉದ್ದೇಶದಿಂದ ಮೈಸೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಈ ಬಾರಿ ‘ಕಲಿಕಾಮೃತ’ ಎಂಬ ವಿಶೇಷ ಕಲಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಕಲಿಕೆಯಲ್ಲಿ ತೀರಾ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡುವ ಕಾರ್ಯವನ್ನು ಕಲಿಕಾಮೃತ ದಲ್ಲಿ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಹಲವಾರು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯನ್ನು ಉತ್ತಮವಾಗಿ ಎದುರಿಸುವ ಆತ್ಮವಿಶ್ವಾಸ ವೃದ್ಧಿಸಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹಲವು ಘಟಕ ಪರೀಕ್ಷೆಗಳು, ಕಿರುಪರೀಕ್ಷೆಗಳು, ಮಧ್ಯವಾರ್ಷಿಕ ಪರೀಕ್ಷೆಗಳು, ಜಿಲ್ಲಾ ಮಟ್ಟ, ಶಾಲಾ ಮಟ್ಟದ ಹಾಗೂ ರಾಜ್ಯಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ಎಲ್ಲ ಪರೀಕ್ಷಾ ಫಲಿತಾಂಶಗಳ ಆಧಾರದ ಮೇಲೆ ಹಾಗೂ ವಿಶೇಷವಾಗಿ ಮೈಸೂರು ದಕ್ಷಿಣ ವಲಯದಲ್ಲಿ ಆಗಸ್ಟ್ ಮತ್ತು ನವೆಂಬರ್ ತಿಂಗಳಿನಲ್ಲಿ ನಡೆಸಿದ ಕಲಿಕಾ ಖಾತ್ರಿ ಪರೀಕ್ಷೆಯ ಫಲಿತಾಂಶ ಮತ್ತು ವಿಶ್ಲೇಷಣೆಯ ಆಧಾರದ ಮೇರೆಗೆ 600 ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿರುವುದು ಗುರುತಿಸಲಾಗಿದೆ.

ಮೈಸೂರು ದಕ್ಷಿಣ ವಲಯ ವಿಭಾಗದಲ್ಲಿ ಈ ಬಾರಿ ಒಟ್ಟು 4,367 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುತ್ತಿದ್ದಾರೆ. ಈ ಪೈಕಿ 600 ವಿದ್ಯಾರ್ಥಿಗಳು ಇಂಗ್ಲಿಷ್, ಗಣಿತ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ವಿಷಯದ ಕಲಿಕೆಯಲ್ಲಿ ಹಿಂದುಳಿದಿರುವುದು ಕಂಡು ಬಂದಿದ್ದು, ಈ ಪೈಕಿ 284 ಬಾಲಕರು, 316 ಬಾಲಕಿಯರು ಇದ್ದಾರೆ. ಯಾವ ವಿದ್ಯಾರ್ಥಿ ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಎಂದು ಗುರುತಿಸಿ ಅಂತಹ ವಿದ್ಯಾರ್ಥಿಗಳಿಗೆ ‘ಕಲಿಕಾಮೃತ’ ಕಾರ್ಯಕ್ರಮದಡಿ ವಿಶೇಷ ತರಬೇತಿ ನೀಡಲಾಗಿದೆ.

ಕುವೆಂಪುನಗರದ ಜ್ಞಾನಗಂಗಾ ಪ್ರೌಢಶಾಲೆ, ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಪ್ರೌಢಶಾಲೆ, ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಕ್ಕಳಿಗೆ ಫೆ.19 ರಿಂದ 24ರವರೆಗೆ ‘ಕಲಿಕಾಮೃತ’ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ತರಬೇತಿ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಅತ್ಯುತ್ತಮ ಶಿಕ್ಷಕರನ್ನು ವಿವಿಧ ಭಾಗಗಳಿಂದ ಕರೆಯಿಸಿಕೊಂಡು ಅವರಿಂದ ಮಕ್ಕಳಿಗೆ ಸುಲಭವಾಗಿ ಪಾಠ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡಲಾಗಿದೆ. ಕ್ಲಿಷ್ಟವೆನಿಸಿರುವ ವಿಷಯದ ಆಧಾರದ ಮೇಲೆ ಪ್ರತಿ ವಿದ್ಯಾರ್ಥಿಗೂ ವೈಯಕ್ತಿಕ ಗಮನಹರಿಸಲಾಗಿದೆ.

ಪ್ರತಿ ಕೇಂದ್ರದಲ್ಲಿ 200 ವಿದ್ಯಾರ್ಥಿಗಳಂತೆ ವಲಯದ 78 ಪ್ರೌಢಶಾಲೆಗಳಿಂದ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಅವರ ಶಾಲೆಯ ಸಮೀಪದ ಕೇಂದ್ರಗಳಿಗೆ ಹೊಂದಿಸಿಕೊಂಡಂತೆ ವಿದ್ಯಾರ್ಥಿಗಳನ್ನು ವಿಂಗಡಿಸಿ ಪ್ರತೀ ಕೇಂದ್ರದಲ್ಲಿ ಐದು ಕೊಠಡಿಗಳಂತೆ ಪ್ರತಿ ತರಗತಿ ಕೊಠಡಿಯಲ್ಲಿ 40 ವಿದ್ಯಾರ್ಥಿಗಳಂತೆ ತಂಡಗಳನ್ನು ರಚಿಸಿ ತರಬೇತಿ ನೀಡಲಾಗಿದೆ. ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 5.30ರವರೆಗೆ ಮಕ್ಕಳಿಗೆ ನಿರಂತರ ಪಾಠ ಮಾಡಲಾಗಿದೆ. ಶಾಲೆಯಿಂದ ಮಕ್ಕಳು ಎಲ್ಲೂ ಹೋಗಬಾರದು ಎಂಬ ಉದ್ದೇಶಕ್ಕೆ ಶಾಲೆಯಲ್ಲಿಯೇ ಮಕ್ಕಳಿಗೆ ಇಸ್ಕಾನ್ ವತಿಯಿಂದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮವನ್ನು ಶಿಸ್ತಿನಿಂದ ನಿರ್ವಹಿಸಲು ಪ್ರತಿ ಕೇಂದ್ರಕ್ಕೆ ಮೂರು ಜನ ದೈಹಿಕ ಶಿಕ್ಷಕರು, ನೋಡಲ್ ಅಧಿಕಾರಿಗಳು, ಹಾಜರಾತಿ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್ 25 ರಿಂದ ಏಪ್ರಿಲ್ 6ರವರೆಗೆ ನಡೆಯಲಿದೆ. ಇನ್ನುಳಿದಿರುವುದು ಕೇವಲ ಒಂದು ತಿಂಗಳು ಮಾತ್ರ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಈ ಒಂದು ತಿಂಗಳ ಅವಧಿಯಲ್ಲಿ ಎಲ್ಲ ವಿಷಯಗಳನ್ನು ಓದಿ ಗ್ರಹಿಸಿ ಪರೀಕ್ಷೆ ಎದುರಿಸುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ನುರಿತ ಸಂಪನ್ಮೂಲ ಶಿಕ್ಷಕರಿಂದ ತಯಾರಿಸಲಾದ ‘ಕಲಿಕಾಮೃತ’ ಪಾಸಿಂಗ್ ಪ್ಯಾಕೇಜ್‌ಅನ್ನು ವಿದ್ಯಾರ್ಥಿ ಗಳಿಗೆ ಮುಖ್ಯ ಶಿಕ್ಷಕರ ಮೂಲಕ ನೀಡಲಾಗಿದೆ. ಈ ಪಾಸಿಂಗ್ ಪ್ಯಾಕೇಜ್‌ನಲ್ಲಿರುವ ಪ್ರಶ್ನೋತ್ತರವನ್ನು ನೀಡಲಾಗಿದೆ. ಈ ಪ್ರಶ್ನೋತ್ತರವನ್ನು ಓದಿಕೊಂಡು ಪರೀಕ್ಷೆಗೆ ಎದುರಿಸಿದರೆ ಉತ್ತೀರ್ಣರಾಗುವುದು ನಿಶ್ಚಿತ. ಅನುತ್ತೀರ್ಣಗೊಳ್ಳುವ ಸಾಧ್ಯತೆ ಇರುವ ಮಕ್ಕಳು ಪಾಸಿಂಗ್ ಪ್ಯಾಕೇಜ್‌ಅನ್ನು ಶ್ರದ್ಧೆಯಿಂದ ಓದಿಕೊಂಡರೆ ‘ಜಸ್ಟ್ ಪಾಸ್’ ಆಗುವುದು ನಿಶ್ಚಿತ.

ಕಳೆದ ಬಾರಿ ಜಿಲ್ಲೆಯ ಒಟ್ಟು 9 ಶೈಕ್ಷಣಿಕ ವಲಯಗಳ ಪೈಕಿ ಮೈಸೂರು ದಕ್ಷಿಣ ವಲಯ 7ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಟಾಪ್-5 ರೊಳಗೆ ಸ್ಥಾನ ಪಡೆಯುವ ಗುರಿಯನ್ನು ಹೊಂದಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಪಟ್ಟಿರುವ ಪರಿಶ್ರಮಕ್ಕೆ ವಿದ್ಯಾರ್ಥಿಗಳು ಸಮರ್ಥವಾಗಿ ಪರೀಕ್ಷೆಯನ್ನು ಎದುರಿಸಿದರೆ ಈ ಬಾರಿ ಮೈಸೂರು ದಕ್ಷಿಣ ವಲಯ ಉತ್ತಮ ಫಲಿತಾಂಶ ಪಡೆಯಲಿದೆ.

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಮೈಸೂರು ದಕ್ಷಿಣ ವಲಯದಲ್ಲಿ ವಿಶೇಷ ಪ್ರಯತ್ನ ನಡೆಸಲಾಗಿದೆ. ಕಲಿಕಾಮೃತ ದಲ್ಲಿ ಶಿಕ್ಷಕರು ನೀಡಿದ ಮಾರ್ಗದರ್ಶನ ಹಾಗೂ ಕಲಿಕಾಮೃತ ಮುಕ್ತಾಯಗೊಂಡ ನಂತರ ವಿದ್ಯಾರ್ಥಿಗಳಿಗೆ ನೀಡಿರುವ ಪ್ರಶ್ನೋತ್ತರವನ್ನು ಓದಿಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರೆ ಉತ್ತೀರ್ಣರಾಗುವುದು ನಿಶ್ಚಿತ. ಕಲಿಕಾಮೃತದಲ್ಲಿ ಪಾಲ್ಗೊಂಡ ಹಲವಾರು ವಿದ್ಯಾರ್ಥಿಗಳ ಕಲಿಕೆ ಸುಧಾರಣೆಗೊಂಡು ಅವರಲ್ಲಿ ಆತ್ಮವಿಶ್ವಾಸ ಮೂಡಿದ್ದು, ಈ ಬಾರಿ ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡುತ್ತಿದ್ದೇವೆ.

ಸಿ.ಎನ್. ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ, ಮೈಸೂರು ದಕ್ಷಿಣ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net