

ಬೆಳ್ತಂಗಡಿ: ಈ ಮುಸ್ಲಿಂ ಯುವಕ ಸ್ವತಃ ಕಾಳಿಕಾಂಬೆಯ ಭಕ್ತ. ದೇವಸ್ಥಾನದ ಪ್ರತಿ ಕಾರ್ಯಕ್ರಮಗಳಲ್ಲೂ ಶ್ರದ್ಧೆಯಿಂದ ಭಾಗವಹಿಸುತ್ತಾನೆ. ಅಷ್ಟೇ ಅಲ್ಲ, ಈಗ ದೇವಿಯ ಹಾಡನ್ನು ಸ್ವತಃ ರಚಿಸಿ, ಶುಶ್ರಾವ್ಯವಾಗಿ ಹಾಡಿದ್ದಾನೆ!
ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ನಿವಾಸಿ, ಇಲೆಕ್ಟ್ರಿಶಿಯನ್ ಆಗಿರುವ ರಮ್ಲಾನ್ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಯುವಕ.
1200 ವರ್ಷಗಳ ಇತಿಹಾಸ ಹೊಂದಿರುವ ಸವಣಾಲಿನ ಇತಿಹಾಸ ಪ್ರಸಿದ್ಧ ಕಾಳಿಕಾಬೆಟ್ಟದ ಶ್ರೀ ದುರ್ಗಾ ಕಾಳಿಕಾಂಬಾ ದೇವಸ್ಥಾನ ಪಶ್ಚಿಮಘಟ್ಟದ ತಪ್ಪಲು ಭಾಗದಲ್ಲಿ ನಿಸರ್ಗ ಸೌಂದರ್ಯದಿಂದಲೇ ಗಮನ ಸೆಳೆಯುತ್ತಿದೆ. ದುರ್ಗಾ ದೇವಿ, ಕಾಳಿಕಾಂಬೆ ಇಲ್ಲಿನ ಪ್ರಧಾನ ದೇವರು.
ಕ್ಷೇತ್ರದ ಪಕ್ಕದಲ್ಲೇ ವಾಸವಾಗಿರುವ ರಮ್ಲಾನ್, ದೇವಿಯ ಪರಮಭಕ್ತ. ಇಲ್ಲಿನ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಶ್ರದ್ಧೆ, ಭಕ್ತಿಯಿಂದ ಭಾಗವಹಿಸುತ್ತಾರೆ. ಈಗ ಮಹಿಮೆದ ಕ್ಷೇತ್ರ ಕಾಳಿಬೆಟ್ಟ ಎಂಬ ಶೀರ್ಷಿಕೆಯ ಕಾಳಿ ಬೆಟ್ಟೊಡು ಮಲ್ಲ ಮಹಿಮೆ ತೂಯೆ ಎಂಬ ಸುಮಾರು 6 ನಿಮಿಷಗಳ ಭಕ್ತಿಗೀತೆಯನ್ನು ರಚಿಸಿ, ಹಾಡಿದ್ದಾರೆ. ಅವರ ಶುಶ್ರಾವ್ಯ ಕಂಠದಿಂದ ಹೊರಹೊಮ್ಮಿರುವ ದುರ್ಗೆಯ ಹಾಡನ್ನು ಎಸ್.ಕೆ.ಕ್ರಿಯೇಷನ್ ಎಂಬ ಯೂಟ್ಯೂಬ್ ಪೇಜ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ರಾಜ್ ಪ್ರಕಾಶ್ ಶೆಟ್ಟಿ ಮದ್ದಡ್ಕ, ಚಿದಾನಂದ ಹೆಗ್ಡೆ, ಮೋಹನ್ ಮೋಲಾಜೆ, ಕಿಶನ್ ಕೋಣಾಜೆ ಸಹಕಾರ ನೀಡಿದ್ದು, ಸಂಕಲನ-ಪ್ರಚಾರ ಕಲೆಯನ್ನು ನಿತಿನ್ ಕೋಟ್ಯಾನ್ ಪೊಯ್ಯೆಗುಡ್ಡೆ, ಅಭಿ ಸವಣಾಲು ನಿರ್ವಹಿಸಿದ್ದಾರೆ.
ಅಪಾರ ಭಕ್ತಿಯಿಂದ ಸಾಹಿತ್ಯ ರಚಿಸಿ ಅದಕ್ಕೆ ದನಿಯಾಗಿರುವ ರಮ್ಲಾನ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಆಸಕ್ತಿ ಇತ್ತು. ಆದರೆ ಬಾಲ್ಯದಿಂದಲೂ ಪ್ರೋತ್ಸಾಹದ ಕೊರತೆ ಇತ್ತು. ನಾನು ಸವಣಾಲು ಕ್ಷೇತ್ರ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಹೀಗಾಗಿ ಕ್ಷೇತ್ರದ ಕುರಿತು ಭಕ್ತಿಗೀತೆ ರಚಿಸಿದ್ದೇನೆ. ಮುಂದೆಯೂ ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದೇನೆ.- ರಮ್ಲಾನ್ ಸವಣಾಲು