ಕಲೆಗಾರ್ತಿ ಸುಮಿತ್ರಮ್ಮಗೆ ಜಿಲ್ಲಾ ಮಟ್ಟದ ಪುರಸ್ಕಾರ

CHITRAHAR
ಸುಮಿತ್ರಮ್ಮ ಪರಶುರಾಮಪ್ಪ ಚಿತ್ರಗಾರ
Published on

ಕಂಪ್ಲಿ: ಇಲ್ಲಿನ ವಿಜಯನಗರ ಜಾನಪದ ಕಲಾ ಕರಕುಶಲಗಾರ್ತಿ, 73 ವರ್ಷ ವಯಸ್ಸಿನ ಸುಮಿತ್ರಮ್ಮ ಪರಶುರಾಮಪ್ಪ ಚಿತ್ರಗಾರ ಅವರು ಬಳ್ಳಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಟ್ಟಿಗೆ, ಮಣ್ಣಿನಿಂದ ಕಲಾ ಮೂರ್ತಿಗಳ ತಯಾರಿ ಸುವುದು, ಆಕರ್ಷಕ ಬಣ್ಣ ನೀಡುವ ಕಿನ್ನಾಳ ಕಲೆ ಇವರಿಗೆ ಸಿದ್ಧಿಸಿದೆ. ಮುಖವಾಡ, ಬತಾನೆ, ಗ್ರಾಮ ದೇವತೆ, ಛತ್ರಿ ಚಾಮರ ಸೇರಿ ನಾನಾ ಜನಪದ ಕಲಾಪ್ರಕಾರದ ಮೂರ್ತಿಗಳನ್ನು ತಯಾರಿಸುತ್ತಾರೆ. ಛತ್ರಿ ಚಾಮರಗಳ ಅಂಚಿಗೆ ರೇಷ್ಮೆ ಕರೆ ಹೆಣೆಯುವ ಕಲೆಯನ್ನು ಕರಗತಮಾಡಿಕೊಂಡಿದ್ದಾರೆ. ಗಣೇಶ, ನಾಗಪ್ಪ, ಮಣ್ಣಿನ ಬಸವಣ್ಣ, ಗಂಗೆ ಗೌರಿ, ಕೃಷ್ಣ ರಾಧಾ, ಬಲರಾಮ, ಪೂತನಿ, ಗೋದಲಿ ಮೊದಲಾದ ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಬಣ್ಣ ಕೊಡುವ ಕಲೆಯಲ್ಲಿ ಪ್ರಸಿದ್ಧಿಯಾಗಿದ್ದಾರೆ. ಪತಿಯ ಕಲಾವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಲಾಕೃತಿಗೆ ಪೂರ್ಣತೆ ತಂದುಕೊಡುತ್ತಿದ್ದರು.

ಕಂಪ್ಲಿಯ ಸಾಹಿತ್ಯ ಸಿರಿ ಪ್ರತಿಷ್ಠಾನದಿಂದ ಕಲಾಸಿರಿ, ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳಿಯು ಅಕ್ಕಶ್ರೀ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ, ತಾಲೂಕು ಘಟಕದಿಂದ ಗೌರವ ಸಮ್ಮಾನ್ ಪ್ರಶಸ್ತಿ, ಬಳ್ಳಾರಿಯ ಶ್ರೀಮಹಾದೇವ ಎಜುಕೇಷನ್ ಆರ್ಟ್ ಆ್ಯಂಡ್ ಕಲ್ಚರಲ್ ಟ್ರಸ್ಟ್, ಹೊಸಪೇಟೆಯ ಸಂಗೀತ ಭಾರತೀಯ ಸಮಾಜಸೇವಾ ಭಾರ್ಗವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಸುಮಿತ್ರಮ್ಮ ಅವರ ಕಿನ್ನಾಳ ಕಲೆ ಅಪರೂಪವಾಗಿದ್ದು ಜತನ ಮಾಡಿಕೊಂಡು ಹೋಗುವಲ್ಲಿ ಪರಶುರಾಮಪ್ಪ ಚಿತ್ರಗಾರ ಕುಟುಂಬ ಮುಂಚೂಣಿಯಲ್ಲಿದೆ. ಇವರನ್ನು ಗುರುತಿಸಿ ಆಯ್ಕೆ ಮಾಡಿದ್ದು ಅತ್ಯಂತ ಸೂಕ್ತವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net