ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ, ಇಬ್ಬರ ಬಂಧನ

13 KSM-1
Published on

ಕಾಮಸಮುದ್ರ: ಲಾಕ್‌ಡೌನ್‌ನಿಂದ ಮದ್ಯದ ಅಂಗಡಿಗಳೆಲ್ಲ ಬಂದ್ ಆಗಿದ್ದು, ಎಣ್ಣೆ ಪ್ರಿಯರು ಮದ್ಯಕ್ಕಾಗಿ ಪರದಾಡುತ್ತಿರುವುದನ್ನೇ ಬಂಡವಾಳ ಮಾಡಿಕೊಂಡು ನಡೆಸಲಾಗುತ್ತಿದ್ದ ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಲು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಹೋಬಳಿಯ ತಮಿಳುನಾಡಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಕದರಿನತ್ತ ಗ್ರಾಮದ ರಮಣೋಜಿರಾವ್, ಬಾಬು ಹಾಗೂ ಮುನ್ನೋಬಾಯಿ ಎಂಬುವವರು ಅಕ್ರಮ ಮದ್ಯ ತಯಾರಿಕೆ ಮಾಡುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕಳ್ಳಭಟ್ಟಿ ತಯಾರಿಸಲು ಬಳಸುತ್ತಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ ಕಚ್ಚಾ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕದರಿನತ್ತ ಗ್ರಾಮದ ರಮಣೋಜಿರಾವ್ ಮತ್ತು ಬಾಬು ಎಂಬುವವರು ತೋಟಗಳಲ್ಲಿ ಸುಮಾರು ಐದಾರು ದಿನಗಳ ಹಿಂದೆ ಕಳ್ಳಭಟ್ಟಿ ತಯಾರಿಸಲು ಎಲ್ಲ ಸಿದ್ಧತೆ ನಡೆಸಿ, ಇನ್ನೇನು ಗುಂಡಿಯಿಂದ ಹೊರತೆಗೆದು ಫಿಲ್ಟರ್ ಮಾಡಿ ಒಂದು ಲೀಟರ್ ಅನ್ನು ಎರಡು ಸಾವಿರ ರೂ. ನಂತೆ ಮಾರಾಟ ಮಾಡಬೇಕೆನ್ನುವಷ್ಟರಲ್ಲಿ ದಾಳಿ ನಡೆಸಲಾಗಿದೆ.

4 ಪ್ಲಾಸ್ಟಿಕ್ ಡ್ರಂಗಳಲ್ಲಿ ತುಂಬಿಸಿಟ್ಟಿದ್ದ 180 ಲೀಟರ್ ಬೆಲ್ಲದ ಕೊಳೆ, 4 ಕೆಜಿ ಬಿಳಿ ಜಾಲಿ ಚಕ್ಕೆ, 30 ಕೆಜಿ ಬೆಲ್ಲ, 4 ಪ್ಲಾಸ್ಟಿಕ್ ಡ್ರಮ್, 2 ಬಿಂದಿಗೆ ಹಾಗೂ ಕಳ್ಳಭಟ್ಟಿ ತಯಾರಿಸಲು ಬಳಸುತ್ತಿದ್ದ ಇತರ ಪರಿಕರ ವಶಕ್ಕೆ ಪಡೆಯಲಾಗಿದೆ.

ದಾಳಿ ವೇಳೆ ಸ್ಥಳದಲ್ಲೇ ಬಾಬು ಮತ್ತು ರಮಣೋಜಿರಾವ್ ಪತ್ನಿಯಾದ ಮುನ್ನಾಬಾಯಿ ಎಂಬುವವರನ್ನು ಅಬಕಾರಿ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ರಮಣೋಜಿರಾವ್ ತಲೆಮರೆಸಿಕೊಂಡಿದ್ದಾರೆ. ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಅಬಕಾರಿ ಉಪ ಆಯುಕ್ತೆ ಕೆ.ಕೆ.ಸುಮಿತ್ರಾ ಮಾರ್ಗದರ್ಶನದಲ್ಲಿ ಕೆಜಿಎಫ್ ಉಪ ವಿಭಾಗದ ಅಬಕಾರಿ ಡಿವೈಎಸ್‌ಪಿ ಡಿ.ಕೆ.ಸಂದೀಪ್, ಅಬಕಾರಿ ನಿರೀಕ್ಷಕಿ ಎಂ.ಆರ್.ಸುಮಾ, ಉಪ ನಿರೀಕ್ಷಕರಾದ ಪ್ರಕೃತಿ.ಪಿ. ಜೈನ್, ಪುಷ್ಪಾ, ಕಾಮಸಮುದ್ರ ಪಿಎಸ್‌ಐ ಆರ್.ದಯಾನಂದ್, ಸಿಬ್ಬಂದಿಗಳಾದ ಗಿರಿ, ನರಸಿಂಹ, ಲಕ್ಷ್ಮಣ ಮಾದಾರ, ಅಂಬಾಸಾ, ಸಾಗರ್, ಹನುಮಂತು, ರವಿಕುಮಾರ್ ಹಾಗೂ ಸಾಗರ್ ಇತರರು ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net