ರಾಜ್ಯ ಸರ್ಕಾರಕ್ಕೆ ರಾಜಕೀಯ ಶಕ್ತಿ ನೀಡಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಿ : ಮಲ್ಲಿಕಾರ್ಜುನ ಖರ್ಗೆ ಸಲಹೆ

IMG-20250308-WA0047
Published on

*ಕಲ್ಯಾಣ ಪಥ ಯೋಜನೆಗೆ ಜೇವರ್ಗಿಯಲ್ಲಿ ಚಾಲನೆ

ಕಲಬುರಗಿ,: ರಾಜ್ಯ ಸರ್ಕಾರಕ್ಕೆ ರಾಜಕೀಯ ಶಕ್ತಿ ನೀಡಿದ ನೆಲ ಕಲ್ಯಾಣ ಕರ್ನಾಟಕ ಪ್ರದೇಶ‌. ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿರುವ ಈ ಪ್ರದೇಶದಲ್ಲಿ ಅಪೌಷ್ಟಿಕತೆಯು ಹೆಚ್ಚು. ಹೀಗಾಗಿ ಇಲ್ಲಿ ಹೆಚ್ಚಿನ ಪ್ರೊಟೀನ್ (ಅಭಿವೃದ್ದಿ ಕೆಲಸಕ್ಕೆ ಒತ್ತು) ನೀಡುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು ಎಂದು ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಶನಿವಾರ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮಾದರಿಯಲ್ಲಿ 1,000 ಕೋಟಿ ರೂ. ವೆಚ್ಚದಲ್ಲಿ 1,166 ಕಿ.ಮೀ. ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಲ್ಯಾಣ ಪಥ ಯೋಜನೆಯ ಚಾಲನಾ‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಳೇ ಮೈಸೂರು, ಬೆಂಗಳೂರು ಪ್ರದೇಶಕ್ಕೆ ಹೋಲಿಕೆ ಮಾಡಿದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶ‌ ಹಿಂದುಳಿದಿರುವದು ಸರ್ವಾತೀತ‌ ಸತ್ಯ. ಅದಕ್ಕೆ ಇಲ್ಲಿನ ನಾಯಕರ ಇಚ್ಚಾಶಕ್ತಿ ಕೊರತೆಯು ಹೌದು ಎಂದ ಅವರು, ಸರ್ಕಾರ ಯಾವುದೇ ಯೋಜನೆ ಅರಂಭಿಸಬೇಕಾದರೆ ಕಲ್ಯಾಣದಿಂದ‌ ಆರಂಭಿಸಿದಲ್ಲಿ ಅದು ಕೊಳ್ಳೆಗಾಲ ವರೆಗೂ ತಲುಪಲಿದೆ. ಇದರಿಂದ ಸರ್ಕಾರಕ್ಕೂ ಮತ್ತು ನಿಮಗೂ ಕಲ್ಯಾಣವಾಗಲಿದೆ. ಇನ್ನು ಮೈಸೂರಿನಿಂದ ಆರಂಭಿಸಿದರೆ ಅದು ಬೆಂಗಳೂರಿಗೆ ಬಂದು‌ ನಿಲ್ಲುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಲ್ಯಾಣ ಪಥ ಯೋಜನೆಯಡಿ 1,000 ಕೋಟಿ ರೂ. ಖರ್ಚು ಮಾಡಿ 1,150 ಕಿ.ಮೀ ಮತ್ತು ರಾಜ್ಯದಾದ್ಯಂತ ಪ್ರಗತಿ ಪಥ ಯೋಜನೆಯಡಿ 5,190 ಕೋಟಿ ರೂ. ಮೊತ್ತದಲ್ಲಿ 7,110 ಕಿ.ಮೀ ರಸ್ತೆ ನಿರ್ಮಿಸುವ ಐತಿಹಾಸಿಕ ನಿರ್ಣಯ‌ ಕೈಗೊಂಡಿದ್ದು, ಮುಂದಿನ‌ ದಿನದಲ್ಲಿ ಹಳ್ಳಿಯಲ್ಲಿ ರಸ್ತೆ ಕ್ರಾಂತಿ ನಿರೀಕ್ಷಿಬಹುದಾಗಿದೆ ಎಂದರು.

ಹಿಂದೆ ಯು.ಪಿ.ಎ. ಸರ್ಕಾರದ ಅವಧಿಯಲ್ಲಿ‌ 2/3 ಮೆಜಾರಿಟಿ ಪಡೆದು 371ಜೆ ಕಾಯ್ದೆ ಜಾರಿಗೆ ತಂದ ಪರಿಣಾಮ ಈ ಎಲ್ಲಾ ಅಭಿವೃದ್ದಿ ಕೆಲಸಗಳು ಸಾಗುತ್ತಿವೆ ಎಂದ ಅವರು, ಪ್ರದೇಶದ ಅಭಿವೃದ್ಧಿಗೆ ಶಿಕ್ಷಣ‌ ಅತಿ ಅವಶ್ಯಕ. ಸರ್ಕಾರಕ್ಕೆ ಪ್ರಶ್ನೆ ಮನೋಭಾವ ಬರಬೇಕಾದಲ್ಲಿ ಶಿಕ್ಷಣ ಮುಖ್ಯ.‌ ಹೀಗಾಗಿ ಶಿಕ್ಷಣ, ಅರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡಿ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ರಾಜ್ಯಕ್ಕೆ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲವಾದರಿಂದ ಕೂಲಿ ಕಾರ್ಮಿಕರಿಗೆ ಉದ್ಯೋಗ ಕೊಡಲು ಸಾಧ್ಯವಾಗುತ್ತಿಲ್ಲ. ಯಾದಗಿರಿ ಬಳಿ ರೈಲ್ವೆ ಬೋಗಿ ಕಾರ್ಖಾನೆ ಕಾರ್ಯಾನುಷ್ಠಾನಕ್ಕೆ ಹಲವು ಬಾರಿ ಪತ್ರ‌ ಬರೆದಿರುವೆ, ಕೇಂದ್ರದಿಂದ ಇನ್ನು ಉತ್ತರ ಬಂದಿಲ್ಲ‌ ಎಂದು ಬೇಸರದಿಂದ ನುಡಿದರು.

*ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಲು ಭೂಮಿ ಸ್ವಾಧೀನಪಡಿಸಿ ಕೊಡಿ:*

ಹಿಂದೆ ತಾವು ಕೇಂದ್ರ ‌ಸಚಿವರಾಗಿದ್ದಾಗ ಸೋಲಾಪೂರ-ಅಕ್ಕಲಕ್ಕೋಟ್- ಅಫಜಲಪೂರ-ಯಾದಗಿರಿ-ರಾಯಚೂರು ಮಾರ್ಗವಾಗಿ ಬೆಂಗಳೂರು ಮತ್ತು ಬೀದರ-ಕಲಬುರಗಿ-ಜೇವರ್ಗಿ-ಶಹಾಪುರ-ಸುರಪುರ-ಹಿರಿಯೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಘೋಷಿಸಿದ್ದು, ಭೂಮಿ ಸ್ವಾಧೀನ ಸೇರಿದಂತೆ ಇತರೆ ಕಾರಣದಿಂದ ಇನ್ನು ಅದು ಪೂರ್ಣಗೊಂಡಿಲ್ಲ. ಈ ಕುರಿತು ಕೇಂದ್ರದ‌ ರಸ್ತೆ ಅಭಿವೃದ್ದಿ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದು, ಜಮೀನು ಭೂಸ್ವಾದೀನ ಮಾಡಿಕೊಟ್ಟಲ್ಲಿ ರಸ್ತೆ ನಿರ್ಮಿಸಿ ಕೊಡುವೆ ಎಂದಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೆ ಇವರೆಡು ರಸ್ತೆ ಮಾರ್ಗದ ಭೂಮಿ ಸ್ವಾಧೀನಪಡಿಸಿಕೊಂಡು ರಸ್ತೆ‌ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ಸಲಹೆ‌ ನೀಡಿದ್ದರು.

*ಕಲ್ಯಾಣಕ್ಕೆ 5,000 ಕೋಟಿ ಶಪಥ:*

ಕಲ್ಯಾಣ ಕರ್ನಾಟಕ‌ದ ಸಮಗ್ರ ಅಭಿವೃದ್ಧಿಗೆ 5,000 ಕೋಟಿ ರೂ. ನೀಡುವುದಾಗಿ ಚುನಾವಣೆ ಪೂರ್ವ ಭರವಸೆ ನೀಡಿದ್ದು, ನಾವು ಮಾಡಿದ ಶಪಥದಂತೆ 2024-25ರಲ್ಲಿ ಮತ್ತು ಶುಕ್ರವಾರ ಮಂಡಿಸಿದ ಆಯವ್ಯಯದಲ್ಲಿ 5,000 ಕೋಟಿ ರೂ. ಅನುದಾನ ಕೊಟ್ಟಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಮಹಿಳಾ ಕೇಂದ್ರಿತವಾಗಿ ರಾಜ್ಯ ಸರ್ಕಾರ ಶಕ್ತಿ, ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಅನ್ನ ಭಾಗ್ಯ ಹಾಗೂ ಯುವ ನಿಧಿ ಯೋಜನೆ ಜಾರಿಗೊಳಿಸಿದ್ದು, ಇದು ಮಹಿಳೆಯರಿಗೆ ಅರ್ಥಿಕ ಶಕ್ತಿ ತುಂಬಿದೆ. ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮದಿಂದ ಈ ಭಾಗಕ್ಕೆ 371ಜೆ ಕಾಯ್ದೆ ಬಂದಿದ್ದು, ಪರಿಣಾಮ ಜಯದೇವ ಆಸ್ಪತ್ರೆ, ಕಿದ್ವಾಯಿ ಅಸ್ಪತ್ರೆ, ಸಿ.ಯು.ಕೆ. ಸ್ಥಾಪನೆ, ಇ.ಎಸ್.ಐ.ಸಿ ಹೀಗೆ ಅನೇಕ ಮೂಲಸೌಕರ್ಯಗಳು ಪ್ರದೇಶದ‌ ಅಭಿವೃದ್ದಿಗೆ ಹೊಸ ಭಾಷೆ ಬರೆದಿದಲ್ಲದೆ ಇಲ್ಲಿನ ಜನರ ಆರ್ಥಿಕ ಸ್ವಾತಂತ್ರಕ್ಕೂ ಕಾರಣವಾಗಿದೆ ಎಂದ ಅವರು, ಯುದ್ದ ಮಾಡಿ ಗೆಲ್ಲುವನು ವೀರನಲ್ಲ, ಜನರ ಪ್ರೀತಿ ಗೆಲ್ಲಿಸುವ ವ್ಯಕ್ತಿನೇ ನಿಜವಾದ ವೀರ. ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಇಲ್ಲಿನ ಜನರ‌ ಪ್ರೀತಿ, ವಿಶ್ವಾಸಗಳಿಸಿರುವ ಜನನಾಯಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇವರ್ಗಿ ಶಾಸಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರು ಮಾತನಾಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ‌ 21 ತಿಂಗಳ ಅವಧಿಯಲ್ಲಿ 13,000 ಕೋಟಿ ರೂ.‌ಅನುದಾನ ಕೆ.ಕೆ.ಅರ್.ಡಿ.ಬಿ. ಮಂಡಳಿಗೆ ನೀಡಿದೆ. ಇದಲ್ಲದೆ ವಿವಿಧ ಇಲಾಖೆಗಳ ಮೂಲಕ ಪ್ರದೇಶದಲ್ಲಿ 20,000 ಕೋಟಿ ರೂ. ಖರ್ಚು ಮಾಡಿದೆ. ಪ್ರದೇಶದ‌ ಅಭಿವೃದ್ಧಿಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದರು.

ಇಂದಿಲ್ಲಿ ಕೆ.ಕೆ.ಅರ್.ಡಿ.ವಿ. ನೆರವಿನಿಂದ ಕಲ್ಯಾಣ ಪಥ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಮಂಡಳಿಯಿಂದ ಈ ಭಾಗದಲ್ಲಿ ಅಕ್ಷರ, ಅರೋಗ್ಯ ಮತ್ತು ಉದ್ಯೋಗ ಆವಿಷ್ಕಾರದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯುವ ಜನತೆಗೆ ಕಲಿಕೆ ಜೊತೆ ಕೌಶಲ್ಯ ನೀಡಲಾಗುತ್ತಿದೆ. 873 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ಸಂಸ್ಥೆಗಳ ಮುಲಸೌಕರ್ಯ ಬಲಪಡಿಸಲಾಗುತ್ತಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ 358 ಕೋಟಿ ರೂ. ಮತ್ತು ಹಿಂದುಳಿದವರ ಕಲ್ಯಾಣಕ್ಕೆ 156 ಕೋಟಿ ರೂ. ಮಂಡಳಿ ವಿನಿಯೋಗಿಸಲಿದೆ. ಪ್ರದೇಶದಲ್ಲಿ ಘೋಷಿತ ನೂತನ ತಾಲೂಕುಗಳಲ್ಲಿ ಪ್ರಜಾ ಸೌಧ ನಿರ್ಮಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ, ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್,

ಆಳಂದ ಶಾಸಕ ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ, ಸಂಸದ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ, ಸದಸ್ಯ ಸಾಗರ ಈಶ್ವರ ಖಂಡ್ರೆ, ಶಾಸಕರುಗಳಾದ ಎಂ.ವೈ.ಪಾಟೀಲ, ಶರಣು ಸಲಗರ, ಚೆನ್ನಾರೆಡ್ಡಿ ಪಾಟೀಲ ತುನ್ನೂರ್, ಅಲ್ಲಮಪ್ರಭು ಪಾಟೀಲ, ರಾಜಾ ವೇಣುಗೋಪಾಲ ನಾಯಕ, ಅಶೋಕ ಮನಗುಳಿ, ವಿಧಾನ ಪರಿಷತ್ ಶಾಸಕರುಗಳಾದ ತಿಪ್ಪಣ್ಣಪ್ಪ ಕಮಕನೂರ, ಭೀಮರಾವ ಬಿ. ಪಾಟೀಲ್, ಡಾ. ಎಂ.ಜಿ. ಮೂಳೆ, ಜಗದೇವ ಗುತ್ತೇದಾರ್ ಹಾಗೂ ಎ. ವಸಂತಕುಮಾರ್ ಇದ್ದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಕೆ.ಕೆ.ಅರ್.ಡಿ.ಬಿ. ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ‌ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಸೇರಿದಂತೆ‌ ಅನೇಕ ಹಿರಿಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net