ಕಲಾವಿಧ ರಾಮಲಿಂಗಪ್ಪ ಅವರಿಗೆ ಜಾನಪದ ಲೋಕದಲ್ಲಿ ಸನ್ಮಾನ

14-02-rama-janapadaloka
Published on

ರಾಮನಗರ: ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಲ್ಲಿ ಪ್ರತಿ ತಿಂಗಳು ನಡೆಯುವ ಲೋಕಸಿರಿ ತಿಂಗಳ ಅತಿಥಿ-104ರ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಕಾಳಾಪುರ ಗ್ರಾಮದ ಮುಖವೀಣೆ, ಶಹನಾಯಿ ಮತ್ತು ನಾದಸ್ವರ ಕಲಾವಿದರಾದ ರಾಮಲಿಂಗಪ್ಪ ಅವರೊಂದಿಗೆ ಭಾನುವಾರ ಸಂವಾದ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಷತ್‌ನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ನಮ್ಮ ಪರಿಷತ್ತಿನ ಮೂಲ ಉದ್ದೇಶವೇ ಜಾನಪದ ಕಲಾವಿದರನ್ನು ಕರೆಸಿ, ಕಲಾಪ್ರದರ್ಶನ ಮಾಡಿಸಿ, ಅವರಿಗೆ ನಿರಂತರವಾಗಿ ಗೌರವಿಸುತ್ತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುವುದೇ ಆಗಿದೆ ಎಂದರು.

ಜಿಲ್ಲಾ ಸಮಾಜಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ವಿ.ಶಿವಕುಮಾರ್ ಮಾತನಾಡಿ, ಜನಪದ ಕಲೆ ತಲೆಮಾರಿನಿಂದ ಹರಿದು ಬಂದಿರುವ ಮೌಖಿಕ ಪರಂಪರೆ. ಈ ಪರಂಪರೆಯನ್ನು ಎಚ್.ಎಲ್.ನಾಗೇಗೌಡರು ಸಾವಿರಾರು ಗಂಟೆ ಕೇಳುವಷ್ಟು ಹಾಡುಗಳನ್ನು, ವಿಡಿಯೋಗಳನ್ನು ದಾಖಲೆ ಮಾಡಿ ಸಂಗ್ರಹಿಸಿರುವುದು ಮುಂದಿನ ತಲೆಮಾರಿಗೆ ಅಮೂಲ್ಯವಾಗಿದೆ ಎಂದರು.

ಕಾವೇರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಬಿಂದುಕುಮಾರ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಎಲ್ಲವೂ ವಾಣಿಜ್ಯೀಕರಣವಾಗುತ್ತಿದೆ. ಈ ಸಂದರ್ಭದಲ್ಲೂ ಜಾನಪದ ಕಲೆಯನ್ನು ಉಳಿಸಿ, ಬೆಳೆಸಬೇಕು; ಈ ಕಲೆಯನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡಬೇಕು. ಈ ಕೆಲಸವನ್ನು ಜಾನಪದ ಲೋಕ ಮಾಡುತ್ತಿದೆ. ಸಮಾಜದಲ್ಲಿ ಬದಲಾವಣೆ ತರುವಲ್ಲಿ ಕಲಾವಿದರ ಪಾತ್ರ ಬಹಳ ದೊಡ್ಡದು ಎಂದರು.

ಗೌರವ ಸ್ವೀಕರಿಸಿ ಮಾತನಾಡಿದ ಕಲಾವಿದ ರಾಮಲಿಂಗಪ್ಪ, ಭಿಕ್ಷೆ ನಮ್ಮ ವೃತ್ತಿಯಾಗಿತ್ತು. ಶಹನಾಯಿ ಊದುತ್ತ ಮನೆ ಬಾಗಿಲಿಗೆ ಹೋದರೆ ಕಡಿದರೆ ಎರಡಾಳು ಆಗುತ್ತಿಯ ಭಿಕ್ಷೆಗೆ ಬಂದಿದ್ದೀಯ ಎಂದು ನೋಯಿಸಿ ಮಾತಾಡೋರು; ಇಂದು ಸರ್ಕಾರ ಸಂಘ-ಸಂಸ್ಥೆಗಳು ನನ್ನನ್ನು ಗುರ್ತಿಸಿ ಗೌರವಿಸಿ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಸಂತೋಷ ತಂದಿದೆ.

ತಮ್ಮ ಕಲೆ, ಕಲಾವಿದ, ಸಮುದಾಯದ ಬಗೆಗಿನ ಮನದಾಳದ ಮಾತುಗಳನ್ನು ಹಂಚಿಕೊಂಡರು. ಚಿಟ್ಟಿಮೇಳದಲ್ಲಿ ಜನಪದ ಗೀತೆಗಳಿಗೆ ಶಹನಾಯಿ ವಾದನದ ಮೂಲಕ ಗಮನ ಸೆಳೆದರು. ವಸಂತಕುಮಾರ್ ಡಿ.ಎಸ್, ಮನೋಜ್‌ಕುಮಾರ್ ಡಿ. ಪುಟ್ಟರಾಜು, ಲೋಕೇಶ್, ವೀರಭದ್ರಯ್ಯ ಡಿ.ವಿ.ನವೀನ್‌ಕುಮಾರ್, ಸಿದ್ಧರಾಜು ತಂಡದವರು ಕರಡಿವಾಧ್ಯ ನುಡಿಸಿ ಪ್ರೇಕ್ಷಕರನ್ನು ಆಕರ್ಷಿಸಿದರು.

ಜಾನಪದ ಲೋಕದ ಕ್ಯೂರೇಟರ್ ಡಾ.ರವಿ ಯು.ಎಂ, ಸಂಶೋಧನಾ ಕೇಂದ್ರದ ಸಂಚಾಲಕ ಡಾ.ಸಂದೀಪ್.ಎಸ್, ಕಾರ್ಯನಿರ್ವಹಣಾಧಿಕಾರಿ ಸರಸವಾಣಿ, ಬಿ.ಆರ್. ಪ್ರಾಧ್ಯಾಪಕರಾದ ಡಾ.ಮೋಹನ್ ಕುಮಾರ್, ಬಿ.ಆರ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net