

ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ರಾಜ್ಯ ಕಲಾವಿದರ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಂಘಸಂಸ್ಥೆಗಳಿಗೆ ಧನ ಸಹಾಯ ಹಾಗೂ ಅಸಂಘಟಿತ ಕಲಾವಿದರಿಗೆ ವೇಷಭೂಷಣ, ವಾದ್ಯ ಪರಿಕರಕ್ಕೆ ಸಹಾಯಧನ ಮಂಜೂರು ಮಾಡಲು 1 ಕೋಟಿ ರೂನಂತೆಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕ್ರಿಯೋ ಯೋಜನೆಯಲ್ಲಿ ಮೀಸಲಿರಿಸಬೇಕು ಎಂದು ಆಗ್ರಹಿಸಿದರು.
ಹತ್ತು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಕಲಾವಿದರು ಅಸಹಜ ಮರಣ ಹೊಂದಿದರೆ ಅವರ ಕುಟುಂಬಕ್ಕೆ 15 ಲಕ್ಷ ರೂ ಪರಿಹಾರ ನೀಡಬೇಕು. ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಮತ್ತು ಶಾಲಾ ಕಾಲೇಜುಗಳಲ್ಲಿ ಜನಪದವನ್ನು ಉಳಿಸಿ ಬೆಳೆಸಲು ಜನಪದ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜನೆ ಪಡೆದು ಕಾರ್ಯಕ್ರಮ ನಡೆಸಿದ ಕಲಾವಿದರಿಗೆ 10 ದಿನದೊಳಗೆ ಅವರ ಸಂಭಾವನೆಯನ್ನು ಖಾತೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಸಾಹಿತಿ, ಕಲಾವಿದರಿಗೆ ಮಾಶಾಸನ ನೀಡಲು ಇರುವ ವಯಸ್ಸನ್ನು 58 ವರ್ಷದಿಂದ 50 ವರ್ಷಕ್ಕೆ ಇಳಿಕೆ ಮಾಡಬೇಕು ಹಾಗೂ ಹಾಲಿ ನೀಡುತ್ತಿರುವ ಮಾಶಾಸನವನ್ನು 2 ಸಾವಿರ ರೂನಿಂದ 5 ಸಾವಿರ ರೂಗೆ ಹೆಚ್ಚಿಸಬೇಕು. ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಕಲಾವಿದರನ್ನು ಮಾಶಾಸನಕ್ಕೆ ಪರಿಗಣಿಸಬೇಕು. ಆಕಾಶವಾಡಿ ಹಾಗೂ ದೂರದರ್ಶನ ಕಲಾವಿದರಿಗೆ ರಾಜ್ಯಾದ್ಯಂತ ಕಲಾಸೇವೆ ಮಾಡಲು ಉಚಿತ ಸರ್ಕಾರಿ ಬಸ್‌ಪಾಸ್ ನೀಡಬೇಕು. ಪ್ರತಿ ಭಾನುವಾರ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಉದಯರಾಗ ಮತ್ತು ಸಂಧ್ಯಾರಾಗ ಕಾರ್ಯಕ್ರಮಗಳನ್ನು ಪುರ್ನ ಪ್ರಾರಂಭಿಸಬೇಕು ಎಂದು ಆಗ್ರಹ ಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನ ಪಡೆದು ಕಾರ್ಯಕ್ರಮ ನೀಡಿರುವ ಕಲಾತಂಡದ ಕಲಾವಿದರಿಗೆ ಎರಡು ವರ್ಷ ಕಳೆದರೂ ಸಂಭಾವನೆ ಪಾವತಿಯಾಗಿಲ್ಲ, ಕ ಊಡಲೇ ಬಾಕಿ ಇರುವ ಕಲಾತಂಡಗಳ ಸಂಭಾವನೆಯನ್ನು ಕಲಾವಿದರಿಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ರಾ.ವೀರೇಶ್ ಪ್ರಸಾದ್, ಕಲಾವಿದರಾದ ಕೀಲಾರ ಕೃಷ್ಣೇಗೌಡ, ಕಾರಸವಾಡಿ ಮಹದೇವು, ಹನಿಯಂಬಾಡಿ ಶೇಖರ್, ದೇವರಾಜ ಕೊಪ್ಪ, ಎಂ.ವಿ.ಶಿವಣ್ಣ, ಜಗದೀಶ್, ಮಂಜುಳಾ, ಉಮಾಪತಿ, ಗೊರವಾಲೆ ಚಂದ್ರಶೇಖರ್, ಸಂತೆಕಸಲಗೆರೆ ಬಸವರಾಜು ಇತರರಿದ್ದರು.