

ಮೈಸೂರು: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ನಗರದ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಆ.21ರವರೆಗೆ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ‘ಕಲಾವೈಭವ-2022’ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಿರುವ ಈ ಮೇಳವು ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9ರವರೆಗೆ ನಡೆಯಲಿದೆ. ಗ್ರಾಹಕರಿಗೆ ಈ ಮೇಳದಲ್ಲಿ ದೇಶದ ಗ್ರಾಮೀಣ ಕರಕುಶಲ, ಕೈಮಗ್ಗ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿದೆ. ಮೇಳಕ್ಕೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ್ ಚಾಲನೆ ನೀಡಿದರು.
ಈ ಸಂದರ್ಭ ಜೆಎಸ್‌ಎಸ್ ಮಹಾವಿದ್ಯಾಪೀಠದ ಮುಖ್ಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಬೆಟಸೂರಮಠ, ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ಧಿ ವಿಭಾಗದ ನಿರ್ದೇಶಕ ರೇವಣ್ಣ ಸ್ವಾಮಿ, ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಎ. ರಾಜಶೇಖರ, ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಎಚ್.ಆರ್. ಮಹದೇವಸ್ವಾಮಿ, ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಎಸ್. ಸುನಿಲ್‌ಕುಮಾರ್ ಹಾಗೂ ಇತರರು ಇದ್ದರು.
ಕಲಾವೈಭವದಲ್ಲಿ 70ಕ್ಕೂ ಹೆಚ್ಚಿನ ಮಳಿಗೆಗಳು ಇದ್ದು, ಆಕರ್ಷಣೀಯ ಕರಕುಶಲ ವಸ್ತುಗಳು, ಕೈಮಗ್ಗ ವಸ್ತ್ರಗಳು, ಕೈಮಗ್ಗದ ರೇಷ್ಮೆ ಮತ್ತು ಕಾಟನ್ ಸೀರೆಗಳು, ಕೈಮಗ್ಗದ ಹೊದಿಕೆಗಳು, ವಿವಿಧ ಲೋಹ, ಜರಿ ಕಸೂತಿಗಳು, ಸಿದ್ಧ ಉಡುಪುಗಳು, ಶಿಲ್ಪಗಳು, ಕುಂಬಾರಿಕೆ, ಚರ್ಮ ಮತ್ತು ಮರಗಳಿಂದ ಮಾಡಿದ ಆಟಿಕೆ ಮತ್ತು ಬೊಂಬೆಯ ಸಾಮಾನುಗಳು, ಗೃಹಬಳಕೆಯ ವಸ್ತುಗಳು, ಉತ್ತರ ಕರ್ನಾಟಕದ ರುಚಿಕರವಾದ ತಿಂಡಿ ಪದಾರ್ಥಗಳು, ಕಸೂತಿ ಮಾಡಿದ ಬ್ಯಾಗುಗಳು, ಕೃತಕ ಆಭರಣಗಳು, ಆಯುರ್ವೇದ ಮತ್ತು ಗಿಡಮೂಲಿಕೆ ಔಷಧಿಗಳು, ರುದ್ರಾಕ್ಷಿ ಮತ್ತು ಮಣಿಗಳು, ಬುಡಕಟ್ಟು ಜನಾಂಗದ ಆಭರಣ, ಬಿದ್ರಿ, ಕುಂದಣಕಲೆ, ಕಂಚಿನ ವಿಗ್ರಹ, ಕಸೂತಿ ಸೀರೆಗಳು, ಮೇಲು ಹಾಸುಗಳು, ಹೊದಿಕೆಗಳು, ಚನ್ನಪಟ್ಟಣದ ಗೊಂಬೆಗಳು, ಮಣ್ಣಿನಿಂದ ತಯಾರಿಸಿದ ಹೂಜಿಗಳು, ಹೂ-ಕುಂದಗಳು, ಹಾಗೂ ಮತ್ತಿತರ ಆಕರ್ಷಣೀಯ ಅಲಂಕಾರಿಕ ವಸ್ತುಗಳು ವಸ್ತುಪ್ರದರ್ಶನದಲ್ಲಿ ಇನ್ನೂ ಹಲವು ವಸ್ತುಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಿದೆ.