

ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎಲ್ಲೂರು ಗ್ರಾಮದಲ್ಲಿ ಆರಂಭಗೊಂಡಿರುವ ಐ.ಟಿ.ಐ ತಾಂತ್ರಿಕ ಕಾಲೇಜು ಸ್ಥಗಿತಗೊಂಡಿದ್ದು ಇದನ್ನು ಕಳತ್ತೂರು ಗ್ರಾಮಕ್ಕೆ ವರ್ಗಾಯಿಸಿ, ಕೂಡಲೇ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ವಿಪ ಸದಸ್ಯ ಮಂಜುನಾಥ ಭಂಡಾರಿ ಆಗ್ರಹಿಸಿದ್ದಾರೆ.
ಸುಮಾರು 8 ವರ್ಷಗಳ ಹಿಂದೆ ಕಾಪು ತಾಲೂಕಿನ ಎಲ್ಲೂರು ಗ್ರಾಮದಲ್ಲಿ ಪ್ರಾರಂಭಗೊಂಡ ಐ.ಟಿ.ಐ ತಾಂತ್ರಿಕ ಕಾಲೇಜಿಗೆ ಸರಿಯಾದ ಕಟ್ಟಡವಿಲ್ಲದೆ ಗ್ರಾಮ ಪಂಚಾಯಿತಿಯ ಒಂದು ಸಣ್ಣ ಕೊಠಡಿಯಲ್ಲಿದೆ. ಕಾಲೇಜಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ತೀರಾ ನಿರಾಸೆಗೊಂಡು ಇದೀಗ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ಪಕ್ಕದ ಕಳತ್ತೂರು ಗ್ರಾಮದಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಸರ್ಕಾರಿ ಜಾಗವನ್ನು ಐ.ಟಿ.ಐ ಕಾಲೇಜಿಗೆ ಮೀಸಲಿರಿಸಲಾಗಿದ್ದು, ಕಾಲೇಜನ್ನು ಶ್ರೀದಲ್ಲಿ ಇಲ್ಲಿಗೆ ವರ್ಗಾಯಿಸಿ ಸ್ವಂತ ಕಟ್ಟಡ ರಚನೆ ಮಾಡಿ, ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.