ಕಲೆ ಸಂಸ್ಕೃತಿಯಿಂದ ಬೆಳೆದ ಭಾರತ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರು

IMG-20240528-WA0012.jpg
Published on

ಹುಬ್ಬಳ್ಳಿ: ಭಾರತ ದೇಶವು ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯದಿಂದ ಬೆಳೆದಿದೆ. ಕಲೆಯಿಂದಾಗಿ ಸಂಸ್ಕೃತಿ ಉಳಿದಿದೆ. ಪ್ರತಿಯೊಬ್ಬರೂ ದೇಶದ ಸಾಂಸ್ಕೃತಿಕ ಸಂಪತ್ತು ಉಳಿಸಿ ಬೆಳೆಸುವ ಕಾರ್ಯಕ್ಕೆ ಪ್ರೋತ್ಸಾಹ ನೀಡಬೇಕೆಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಕಲಾ ಸುಜಯ ನೃತ್ಯ ಅಕಾಡೆಮಿಯ ದಶಕದ ಸಂಭ್ರಮ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಜಗತ್ತಿನಲ್ಲಿ ಭಾರತವು ಆರ್ಥಿಕತೆಯಿಂದಾಗಿ ಬೆಳೆದಿಲ್ಲ. ಬದಲಾಗಿ ಇಲ್ಲಿನ ಕಲೆ, ಸಂಸ್ಕೃತಿ ಸಂಪತ್ ಭರಿತವಾಗಿದೆ. ವಿದೇಶಿಯರು ಸಹ ಭಾರತದ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ಹಾಗಾಗಿ ಭಾರತ ಬೆಳೆಯುತ್ತಿದೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವು 500 ವರ್ಷದ ಬಳಿಕ ನಿರ್ಮಾಣವಾಗಿದೆ. ಈ ದೇವಸ್ಥಾನವು ದೇಶದ ಕಲೆ ಸಾರುವ ದೊಡ್ಡ ಮಂದಿರ. ಇಷ್ಟೊಂದು ಸುಂದರವಾಗಿ ಮಂದಿರ ನಿಮಾರ್ಣವಾಗಲು ಕಲೆಯೇ ಮೂಲ ಕಾರಣ ಎಂದರು.

ಕಲಾ ಸುಜಯ ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಭಾರತೀಯ ಸಂಸ್ಕೃತಿ ಹಾಗೂ ಕಲೆ ಉಳಿಸಿ ಬೆಳೆಸುವ ಕೆಲಸವನ್ನು ಉತ್ತಮವಾಗಿ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಲಾ ಸುಜಯ ಅಕಾಡೆಮಿಯ 50 ವಿದ್ಯಾಥಿರ್ಗಳು ಶ್ರೀರಾಮನಿಗೆ ನೃತ್ಯ ನಮನ ಎಂಬ ನೃತ್ಯ ಪ್ರದರ್ಶನ ನೀಡಿದರು. ಪೇಜಾವರ ಸ್ವಾಮೀಜಿಗಳು ಸಹ ನೃತ್ಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ವಸುಂಧರಾ ದೊರೆಸ್ವಾಮಿ ಅವರ ಕ್ಷಾತ್ರ ದ್ರೌಪದಿ ಎಂಬ ವಿನೂತ ಏಕವ್ಯಕ್ತಿ ಪ್ರದರ್ಶನ ಜನಮನ ಸೂರೆಗೊಂಡಿತು.

ದ್ರಾವಿಡ ಬ್ರಾಹ್ಮಣ ಸಂಘದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಸ್ವರ್ಣಾ ಆಭರಣ ಮಳಿಗೆಯ ಗುಜ್ಜಾಡಿ ಗೋಪಾಲಕೃಷ್ಣ ನಾಯಕ, ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ, ಕಮಲಾ ಜೋಶಿ ಇದ್ದರು. ಕಲಾ ಸುಜಯ ಸಂಚಾಲಕ ವಿದ್ವಾನ್ ಸುಜಯ ಶಾನಭಾಗ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net