

ಕಳಸ: ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದ ಶ್ರೀ ಕಲಶೇಶ್ವರ ದೇವಾಲಯದಲ್ಲಿ ಶ್ರೀ ಕಲಶೇಶ್ವರ ಸ್ವಾಮಿ ಶ್ರೀಮನ್ ಮಹಾರಥೋತ್ಸವ ಸಂಭ್ರಮದಿಂದ ನಡೆಯಿತು. ಜಾತ್ರೆ ಅಂಗವಾಗಿ ಗ್ರಾಮವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ದೇವಾಲಯಕ್ಕೆ ವಿದ್ಯುದ್ವೀಪಗಳ ಅಲಂಕಾರ ಮಾಡಲಾಗಿತ್ತು. ನಾಲ್ಕು ಕೂಡಿಗೆಗಳ ಮೂಲ ನಿವಾಸಿಗಳಾದ ಗೌಡಲು ಜನಾಂಗ ಸಿದ್ಧಪಡಿಸಿದ ಭವ್ಯ ಬ್ರಹ್ಮರಥದಲ್ಲಿ ಶ್ರೀಕಲಶೇಶ್ವರ ಸ್ವಾಮಿ ವಿರಾಜಮಾನವಾಗುವುದನ್ನು ಕಣ್ತುಂಬಿಸಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದರು. ಮಧ್ಯಾಹ್ನ ಸ್ತುತಿ ಪಾಠಕರು ಸ್ತುತಿ ಘೋಷಗಳನ್ನು ಪಠಿಸುತ್ತಾ ಛತ್ರಿ, ಚಾಮರ, ಮಂಗಳ ವಾದ್ಯಗಳೊಂದಿಗೆ ಹೂವಿನ ಅಲಂಕಾರದಲ್ಲಿ ಶ್ರೀದೇವರ ಉತ್ಸವ ಮೂರ್ತಿಯನ್ನು ಹೊತ್ತು ತರಲಾಯಿತು. ಕಲಶೇಶ್ವರನ ಉತ್ಸವ ಮೂರ್ತಿಯನ್ನು ಭವ್ಯ ಬ್ರಹ್ಮರಥದಲ್ಲಿ ಕುಳ್ಳಿರಿಸಿ ಪೂಜೆ ಮಾಡಲಾಯಿತು. ಈ ವೇಳೆ ಭಕ್ತಾದಿಗಳು ದೇವರಿಗೆ ಲ, ಪುಷ್ಪಾ ಆರ್ಚನೆ ಮಾಡಿದರು. ತಾವು ಬೆಳೆದ ಕಾಫಿ,ಕಾಳುಮೆಣಸು, ಏಲಕ್ಕಿ ಇನ್ನಿತರೆ ಧಾನ್ಯ ಸಮರ್ಪಿಸಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ನಂತರ ಅಲಂಕೃತಗೊಂಡ ಭವ್ಯ ಬ್ರಹ್ಮರಥವನ್ನು ಶ್ವೇತ ವಸಧಾರಿಗಳು ಎಳೆದರು. ರಾತ್ರಿ ಪಟ್ಟಣದ ರಾಜಬೀದಿಗಳಲ್ಲಿ ಗ್ರಾಮ ಪ್ರದಕ್ಷಿಣೆಗೆ ತೆರಳುವ ದೇವರು ಜಾತಿ ಮತ, ವರ್ಗ ಬೇಧವಿಲ್ಲದೆ ಬ್ರಹ್ಮ ರಥದಲ್ಲಿಯೇ ಕುಳಿತು ಸರ್ವ ಜನಾಂಗದಿಂಲೂ ನಮಸ್ಕಾರ ಸ್ವೀಕರಿಸಿ ಮನೆ ಬಾಗಿಲಲ್ಲಿ ನೀಡುವ ಹಣ್ಣು ಕಾಯಿ ಲ, ಪುಷ್ಪಗಳನ್ನು ಸ್ವೀಕರಿಸುತ್ತಾ ಕಳಸದ ಮಂಜಿನಕಟ್ಟೆಯವರೆಗೆ ಸಾಗಿತ್ತು. ರಾಜಬೀದಿಯಲ್ಲಿ ಸಾಗುವಾಗ ಪಟಾಕಿ, ಸಿಡಿಮದ್ದುಗಳು, ಚೆಂಡೆ, ಓಲಗ, ವಿವಿಧ ವೇಷಭೂಷಣದ ವಿನೋಧಾವಳಿಗಳು ಕಣ್ಣಿಗೆ ಹಬ್ಬ ತಂದುಕೊಟ್ಟವು. ಪಟ್ಟಣದ ಸುತ್ತಮುತ್ತಲ ಹೊರನಾಡು, ಬಾಳೆಹೊಳೆ, ಕುದುರೆಮುಖ, ಜಾಂಬ್ಲೆ,ನೆಲ್ಲಿಬೀಡು, ಮರಸಣಿಗೆ, ಹಿರೇಬೈಲು, ಜಾವಳಿ, ಬಸರಿಕಟ್ಟೆ ಮತ್ತಿತರ ಕಡೆಯಿಂದ ಜನಸಾಗರ ಹರಿದುಬಂದಿತ್ತು. ರಥೋತ್ಸವದ ವೈಭವವನ್ನು ಕೇವಲ ಆಸ್ತಿಕರಷ್ಟೇ ಅಲ್ಲದೆ ನಾಸ್ತಿಕರು ಕಣ್ತುಬಿಂಸಿಕೊಂಡು ಸಂಭ್ರಮಿಸಿದರು. ಜನರು ಭಕ್ತಿ ಸಾಗರದಲ್ಲಿ ಮುಳುಗಿದರೆ ಜಾತ್ರೆ ಸಂತೆ, ವ್ಯಾಪಾರ ವಹಿವಾಟು ಜೋರಾಗಿತ್ತು.