ಹುತ್ತದಮ್ಮ ದೇವಿ ದೇಗುಲದ ಕಲಶಾರೋಹಣ

ಹುತ್ತದಮ್ಮ ದೇವಿ ದೇಗುಲದ ಕಲಶಾರೋಹಣ
Published on

 ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಸಬಾ ಹೋಬಳಿಯ ದಾಸೀಹಳ್ಳಿ ರಾಜರಾಜೇಶ್ವರಿ ಹುತ್ತದಮ್ಮ ದೇವಿಯ ನೂತನ ದೇವಾಲಯದ ವಿಮಾನ ಗೋಪುರ ಕಲಶಾರೋಹಣ ಕಾರ್ಯಕ್ರಮ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮುಂಜಾನೆಯಿಂದ ವಿವಿಧ ಪೂಜಾ ವಿಧಿವಿಧಾನಗಳು ಜರುಗಿದವು. ಪುರೋಹಿತರ ತಂಡದಿಂದ ದೇವಿಗೆ ಅಭಿಷೇಕ, ದೇವಾಲಯದ ಆವರಣದಲ್ಲಿ ನವದುರ್ಗ ಸಮೇತ ಚಂಡಿಕಾ ಹೋಮ, ಪ್ರತ್ಯಂಗಿರಿ ಹೋಮ, ಮಹಾ ಪೂರ್ಣಾಹುತಿ ವಿಧಿವಿಧಾನಗಳು ನೆರವೇರಿದವು.

ಈ ಸಂದರ್ಭದಲ್ಲಿ ದಾಸೀಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ 108 ಕುಂಭಗಳ ಸಮೇತ ಅದ್ದೂರಿ ಮೆರವಣಿಗೆ ನಡೆಯಿತು. ನಂತರ ವೃಶ್ಚಿಕ ಲಗ್ನದಲ್ಲಿ ರಾಜರಾಜೇಶ್ವರಿ ಹುತ್ತದಮ್ಮ ದೇವಿಯ ಕಲಶಾರೋಹಣ ನಡೆದು ಬಲಿ ಪ್ರಧಾನ ದೃಷ್ಟಿ ಪೂಜೆ ನೆರವೇರಿತು.

ಅಮ್ಮನಹಟ್ಟಿ ಗಂಗಾ ಮಾಳಿಕಾ ದೇವಿ, ಯಾದಾಪುರದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಸೇರಿದಂತೆ ಸುತ್ತ-ಮುತ್ತಲಿನ ದೇವರುಗಳ ಉತ್ಸವ ಮೂರ್ತಿಗಳನ್ನು ತರಲಾಗಿತ್ತು. ಪೂಜೆ ಬಳಿಕ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶಾಸಕ ಕೆ.ಎಂ.ಶಿವಲಿಂಗೇಗೌಡ, ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಸೇರಿದಂತೆ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ದಾಸೀಹಳ್ಳಿ ರಾಜರಾಜೇಶ್ವರಿ ಹುತ್ತದಮ್ಮ ದೇಗುಲ ಸಮಿತಿಯವರು, ಸುತ್ತಮುತ್ತಲಿನ ಗ್ರಾಮಸ್ಥರು ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net