

ವಿಜಯನಗರ: ಎರಡು ವರ್ಷಗಳ ಬಳಿಕ ನಡೆದ ರಥೋತ್ಸವದಲ್ಲಿ ರಥದಿಂದ ಕಳಶ ಕಳಚಿ ಬಿದ್ದಿರುವುದು, ಭಕ್ತರಲ್ಲಿ ಆತಂಕ ಮೂಡಿಸಿದ್ದು, ಅವರನ್ನು ಚಿಂತೆಗೀಡು ಮಾಡಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ದೇವಸ್ಥಾನವೊಂದರಲ್ಲಿ ಈ ವಿದ್ಯಮಾನ ನಡೆದಿದೆ.
ಹೊಸಪೇಟೆಯ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವ ಕರೊನಾ ಕಾರಣದಿಂದಾಗಿ ಕಳೆದೆರಡು ವರ್ಷಗಳ ಕಾಲ ನಡೆದಿರಲಿಲ್ಲ. ಆದರೆ ಈ ಸಲ ಕರೊನಾ ಗಣನೀಯವಾಗಿ ಜನಜೀವನ ಸಹಜಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ರಥೋತ್ಸವ ನಡೆಸಲಾಗಿದೆ. ಈ ಬಾರಿ ಹೊಸದಾಗಿ ತೇರು ನಿರ್ಮಾಣ ಮಾಡಿ, ಸಹಸ್ರಾರು ಮಂದಿಯ ಸಮ್ಮುಖದಲ್ಲಿ ಅದ್ಧೂರಿಯಾಗಿಯೇ ರಥೋತ್ಸವ ನಡೆಸಲಾಗಿದೆ.
ಆದರೆ ಹೀಗೆ ನಡೆದ ರಥೋತ್ಸವದಲ್ಲಿ ತೇರು ಸುಮಾರು 50 ಮೀಟರ್ ದೂರದಷ್ಟು ಚಲಿಸುವಷ್ಟರಲ್ಲಿ ರಥದ ಕಳಶ ಕಳಚಿಕೊಂಡು ಬಿದ್ದಿದೆ. ಆ ಕಳಶವನ್ನು ಮತ್ತೆ ಕಟ್ಟಿದರೂ ಅದು ನಿಂತಿಲ್ಲ. ಪರಿಣಾಮವಾಗಿ ದೇವಳದ ಭಕ್ತರು ಕಳಶ ಕಳಚಿಕೊಂಡಿರುವುದು ಅಪಶಕುನವಾ ಎಂಬ ಆತಂಕಕ್ಕೆ ಒಳಗಾಗಿದ್ದು, ಚಿಂತೆಗೀಡಾಗಿದ್ದಾರೆ.