ತುಂಬಿ ಹರಿದ ಕಳಸಕೊಪ್ಪ ಕೆರೆ

Kalasakoppa Lake overflowed
ಕೋಡಿ ಹರಿದಿರುವ ಕಳಸಕೊಪ್ಪ ಕೆರೆ
Published on

ಕಲಾದಗಿ: ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಕಳಸಕೊಪ್ಪ ಕೆರೆ ಕೋಡಿ ಹರಿದಿದೆ. ಇತ್ತೀಚಿನ ವರ್ಷಗಳಲ್ಲಿ ಭಾಗಶಃ ಭರ್ತಿಯಾಗುತ್ತಿದ್ದ ಕೆರೆ ಪ್ರಸಕ್ತ ವರ್ಷ ತುಂಬಿ ಬುಧವಾರ ಬೆಳಗ್ಗೆಯಿಂದ ಕೋಡಿ ಹರಿದು ರೈತರ ಸಂತಸಕ್ಕೆ ಕಾರಣವಾಗಿದೆ.

ಹಲವು ವರ್ಷಗಳಿಂದ ಸರಿಯಾಗಿ ಮಳೆಯಾಗದೆ ಕಳಸಕೊಪ್ಪ ಕೆರೆ ಭರ್ತಿಯಾಗಿರಲಿಲ್ಲ. ಬಾಗಲಕೋಟೆ ತಾಲೂಕಿನ ಐದು ಗ್ರಾಮಗಳ 1142 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಕಳಸಕೊಪ್ಪ ಕೆರೆ ಸೇರಿ ಎಂಟು ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಶಾಸಕೆ ಜೆ.ಟಿ.ಪಾಟೀಲ ಗ್ರಾಮದ ಶೆಲ್ಲಿಕೇರಿ ಕ್ರಾಸ್‌ಬಳಿ ಇರುವ ಹೆರಕಲ್ ಏತ ನೀರಾವರಿ(ದಕ್ಷಿಣ)ಯೋಜನೆಯ ಜಾಕ್‌ವೆಲ್‌ನಲ್ಲಿ ಜುಲ್ಯೆ 14 ರಂದು ಚಾಲನೆ ನೀಡಿದ್ದರು. ಕೆರೆಗೆ ನೀರು ಹರಿಸುವ ಯೋಜನೆ ರೂಪಿಸಿದರೂ ವಿಸ್ತಾರವಾದ ಪಾತ್ರ ಪೂರ್ಣ ತುಂಬಲು ವಿಳಂಬವಾಗಿತ್ತು. ಈಗ ಉತ್ತಮ ಮಳೆ ಸುರಿದು ಒಂದು ತಿಂಗಳು ಮುಂಚೆಯೇ ಕೆರೆ ಭರ್ತಿಯಾಗಿ ಕೋಡಿ ಹರಿಯುತ್ತಿದೆ.

ನಯನ ಮನೋಹರ

ಸುತ್ತಲೂ ಹಸಿರು ತುಂಬಿದ ಬೆಟ್ಟ, ಕಷಿ ಭೂಮಿ ನಡುವೆ ಇರುವ 200 ಹೆಕ್ಟೇರ್ ವಿಸ್ತೀರ್ಣದ ಕೆರೆ ಭರ್ತಿಯಾಗಿದ್ದು ಒಂದೆಡೆಯಾದರೆ, ಇನ್ನೊಂದು ಕಡೆ ಕೆರೆ ಕೋಡಿ ಬಿದ್ದು 900 ಅಡಿ ಉದ್ದವಿರುವ ಓಗ್ ಮಾದರಿ ಕಟ್ಟೆ ಮೇಲಿಂದ ನೀರು ಧುಮ್ಮಿಕ್ಕುತ್ತಿರುವುದು ನಯನ ಮನೋಹರವಾಗಿ ಕಂಗೊಳಿಸುತ್ತಿದೆ. ಜಾಕ್‌ವೆಲ್‌ನಿಂದ ನೀರು ಹರಿಸಿದ ಎಂಟು ಕೆರೆಗಳಲ್ಲಿ ಕಳಸಕೊಪ್ಪ, ಮಾಳಗಿ ಹಾಗೂ ಜಮ್ಮನಕಟ್ಟಿ ಕೆರೆಗಳು ತುಂಬಿವೆ. ಅನವಾಲ, ಸಾಗನೂರು, ಕೈನಕಟ್ಟಿ, ಕೆರೂರ ಹಾಗೂ ಕಟಗೇರಿ ಕೆರೆಗಳು ತುಂಬುವ ಹಂತದಲ್ಲಿವೆ.

ಪ್ರವಾಸಿ ತಾಣವಾಗಲಿ

ವಿಶಾಲವಾದ ಕಳಸಕೊಪ್ಪ ಕೆರೆ ಒಂದು ಕಡೆ ಹಸಿರುಮಯ ಬೆಟ್ಟ, ಅದರ ಸುತ್ತ ಆಹ್ಲಾದಕರ ವಾತಾವರಣ. ಇಂಥ ಪ್ರದೇಶವನ್ನು ಜಿಲ್ಲೆಯ ಒಂದು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿಸುವ ಅವಕಾಶವಿದ್ದು, ಈ ನಿಟ್ಟಿನಲ್ಲಿ ಕೆಲಸವಾಗಬೇಕು ಎಂಬುದು ಪ್ರವಾಸಿ ಪ್ರಿಯರ ಅಪೇಕ್ಷೆಯಾಗಿದೆ. 2018 ರಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ ಅವರ ಜೊತೆಗೂಡಿ ಶಾಸಕ ಜೆ.ಟಿ.ಪಾಟೀಲ ಯೋಜನೆ ತಯಾರಿಸಿದ್ದರು. ಕೆರೆಯಲ್ಲಿ ಬೋಟಿಂಗ್, ಸಾಹಸ ಜಲಕ್ರೀಡೆ, ಕೆರೆ ಸುತ್ತ ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆ, ಊಟೋಪಚಾರದ ವ್ಯವಸ್ಥೆ, ಪಕ್ಷಿಧಾಮ ನಿರ್ಮಾಣ ಕುರಿತು ನೀಲಿನಕ್ಷೆ ಸಿದ್ಧವಾಗಿತ್ತು. ಒಂದೆರಡು ಸಲ ಸ್ಥಳ ವೀಕ್ಷಣೆಯೂ ಆಗಿತ್ತು. ಆದರೆ ಅದು ಕಾರ್ಯಗತವಾಗದೆ ಹಾಗೆಯೇ ಉಳಿದಿದೆ. ವಿಧಾನಸಭೆ ಚುನಾವಣೆಯಲ್ಲಿ ಜೆ.ಟಿ.ಪಾಟೀಲ ಆಯ್ಕೆಯಾಗಿ ಮತ್ತೆ ಶಾಸಕರಾಗಿದ್ದಾರೆ. ಕಳಸಕೊಪ್ಪ ಕೆರೆ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ರೂಪಿಸಬೇಕೆಂಬುದು ಪರಿಸರ ಪ್ರಿಯರ ಒತ್ತಾಯವಾಗಿದೆ.

ಪ್ರವಾಸೋದ್ಯಮ ಸಚಿವರು ಮತ್ತು ಜಲಸಂಪನ್ಮೂಲ ಸಚಿವರ ಗಮನಕ್ಕೆ ತಂದು ಕಳಸಕೊಪ್ಪ ಕೆರೆಗೆ ಕಾಯಕಲ್ಪ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ.
ಜೆ.ಟಿ.ಪಾಟೀಲ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net