

ಕಳಸ: ಕಳಸ ಗ್ರಾಮ ಪಂಚಾಯಿತಿಯಿಂದ ಅಚ್ಚುಕಟ್ಟಾಗಿ ನಿರ್ಮಾಣಗೊಂಡಿರುವ ನೂತನ ಮಾಂಸ ಮತ್ತು ಮೀನು ಮಾರುಕಟ್ಟೆ ಇದೀಗ ಸಾರ್ವಜನಿಕರ ಸೇವೆಗೆ ಸಜ್ಜಾಗಿದ್ದು, ಸೆ.30ರಂದು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.
ಈ ಹಿಂದೆ ಕಳಸ ಪಟ್ಟಣದ ಕೇಂದ್ರ ಭಾಗದಲ್ಲಿ ಮೀನು, ಕೋಳಿ, ಕುರಿ ಮಾಂಸ, ಒಣ ಮೀನಿನ ಮಾರುಕಟ್ಟೆ ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ಸರಿಯಾದ ವ್ಯವಸ್ಥೆಗಳು ಇಲ್ಲದಿರುವುದರಿಂದ ಪಂಚಾಯಿತಿಗೆ ನಿರ್ವಹಣೆ ಮಾಡಲು ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ದಿಟ್ಟ ನಿರ್ಧಾರ ಕೈಕೊಂಡ ಕಳಸ ಗ್ರಾಮ ಪಂಚಾಯಿತಿ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಕಳಸ ಸಂತೆ ಮಾರುಕಟ್ಟೆ ಬಳಿ ಪ್ರತ್ಯೇಕವಾಗಿ ಸುಸಜ್ಜಿತ ಮಾಂಸ ಮತ್ತು ಮೀನು ಮಾರುಕಟ್ಟೆ ಸ್ಥಾಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮಾರುಕಟ್ಟೆಯಲ್ಲಿ 10 ಕೋಳಿ, 2 ಹಂದಿ, 1 ಒಣಮೀನು, 1 ಹಸಿ ಮೀನು, 1 ಕುರಿ ಮಾಂಸ, 1 ಕೋಲ್ಡ್ ಸ್ಟೋರೇಜ್ ಅಂಗಡಿ ತೆರೆಯಲಾಗಿದೆ.ಅಲ್ಲದೆ ಪ್ರತ್ಯೇಕವಾದ ಕೋಳಿ ಸಂಗ್ರಹ ಕೊಠಡಿ ಜತೆಗೆ 24 ಗಂಟೆ ನೀರು ಸರಬರಾಜು, ಟಾಯ್ಲೆಟ್, ಶುದ್ಧಕುಡಿಯುವ ನೀರಿನ ಸೌಲಭ್ಯ ಕೂಡ ಕಲ್ಪಿಸಲಾಗಿದೆ.