ಇತರ ಸಂಘ, ಸಂಸ್ಥೆಗಳಿಗೆ ಮಾದರಿಯಾದ ಕಳಸ ಪಿಎಸಿಎಸ್

5kls6
Published on

ಕಳಸ: ನಮಗಾಗಿ ಬದುಕದೆ ನಮ್ಮ ಬದುಕನ್ನು ಇತರರಿಗಾಗಿ ಮುಡಿಪಾಗಿಟ್ಟು ಇದರಿಂದ ಸಾಧನೆ ಪಡೆದಾಗ ನಮ್ಮ ಜೀವನದಲ್ಲಿ ತೃಪ್ತಿ ಕಾಣಬಹುದು ಎಂದು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಹೇಳಿದರು.

ಕಳಸದಲ್ಲಿ ಮಂಗಳವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಸಂಸ್ಥೆಯ ಸರ್ವ ಸದಸ್ಯರಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯಗೆ ಗೌರವ ಸಮರ್ಪಣೆ ಹಾಗೂ ನೂತನ ಆಡಳಿತ ಮಂಡಳಿ ನಿರ್ದೇಶಕರ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.

ಮಂಜಪ್ಪಯ್ಯ ಈ ಭಾಗದ ರೈತರ ಪಾಲಿಗೆ ಬೆಳಕಾಗಿ ಜನರ ಪ್ರೀತಿ ವಿಶ್ವಾಸಗಳಿಸಿಕೊಂಡಿದ್ದಾರೆ. ತನಗಾಗಿ ಬದುಕದೇ ಈ ಊರಿನ ಜನರಿಗಾಗಿ ಬದುಕಿದ್ದಾರೆ. ಅವರಿಗಿದ್ದ ಛಲ ಅವರಿಗೆ ಸಾಧನೆ ಹುಡುಕಿಕೊಂಡು ಬಂದಿರುವ ಫಲವಾಗಿ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ. ಇಲ್ಲಿಯ ಸಂಸ್ಥೆ ಇತರೆ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುವಂತೆ ಬೆಳೆದಿದೆ. ಸಂಘದ ಸದಸ್ಯರು ಸಂಘದ ಮೇಲೆ ಹೆಚ್ಚಿನ ವಿಶ್ವಾಸವಿಟ್ಟು ಇನ್ನಷ್ಟು ಬೆಳೆಸಬೇಕು ಎಂದು ಹೇಳಿದರು.

ಸಹಕಾರ ರತ್ನ ಪುರಸ್ಕೃತ ಜಿ.ಕೆ.ಮಂಜಪ್ಪಯ್ಯ ಮಾತನಾಡಿ, ಈ ಸಂಸ್ಥೆ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಂಘದ ಸದಸ್ಯರು, ನಿರ್ದೇಶಕರು ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುವ ನೌಕರರಿಂದ ಸಾಧ್ಯವಾಗಿದೆ. ಇವರೆಲ್ಲರ ಪ್ರತಿಫಲವಾಗಿ ನನಗೆ ಸಹಕಾರ ರತ್ನ ಪ್ರಶಸ್ತಿ ಸಿಕ್ಕಿದೆ. ಸಂಸ್ಥೆಯಲ್ಲಿ ಆಗಿರುವ ಅಭಿವೃದ್ಧಿ ಅಲ್ಪ ಇದರಿಂದ ನಾನು ತೃಪ್ತನಾಗಿಲ್ಲ ಇನ್ನು ಮಾಡಬೇಕಿರುವ ಕೆಲಸ ಬಹಳಷ್ಟಿದೆ. ಇಲ್ಲಿಯ ಜನ, ಜನಪ್ರತಿನಿಧಿಗಳು, ಹಾಗೂ ಸರ್ಕಾರ ಈ ಸಂಸ್ಥೆ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net