

ಹುಬ್ಬಳ್ಳಿ: ಮಹದಾಯಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು. ಇದರಿಂದ ಸಮಸ್ಯೆ ಬಗೆಹರಿಯಲಿದೆ. ನನಗಿರುವ ಮಾಹಿತಿ ಪ್ರಕಾರ ಸಮಸ್ಯೆ ಬೇಗ ಬಗೆ ಹರಿದು ಶೀಘ್ರವೇ ಕಳಸಾ-ಬಂಡೂರಿ ಯೋಜನೆಯ ಕಾಮಗಾರಿ ಆರಂಭವಾಗುವ ವಿಶ್ವಾಸವಿದೆ ಎಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರ ಇಲಾಖೆ ಒಪ್ಪಿಗೆ ಕೊಡಬೇಕು. ಈ ಕುರಿತು ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಮೋದಿ ಅವರು ಅವಕಾಶ ಕೊಟ್ಟಿಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಗಮನಕ್ಕೂ ತಂದಿದ್ದೇನೆ. ಸಮಸ್ಯೆ ಬಗೆಹರಿಸುವ ಸಾಧ್ಯತೆ ಇದೆ ಎಂದರು.
ನಾನು ಯಾವುದೇ ನಿಗಮ-ಮಂಡಳಿ ಕೇಳಿಲ್ಲ. ಆದರೆ ಕೃಷಿ ಸಚಿವರಾಗಬೇಕೆಂಬ ಇಚ್ಛೆ ಇದೆ. ನನಗೂ ಕಾಲಾವಕಾಶ ಸಿಗುವ ನಂಬಿಕೆ ಇದೆ. ಎರಡೂವರೇ ವರ್ಷದ ನಂತರ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಇದೆಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಪ್ರತಿಕ್ರಿಯಿಸಿದರು.