

ರಾಮದುರ್ಗ: ಲೋಕಸಭಾ ಚುನಾವಣೆ ಗೆಲುವು ನನ್ನದಲ್ಲ. ನನ್ನ ಗೆಲುವು ಕಾರ್ಯಕರ್ತರಿಗೆ ಸಮರ್ಪಿಸುತ್ತೇನೆ. ಬೆಳಗಾವಿಯನ್ನು ನನ್ನ ಕರ್ಮಭೂಮಿಯಾಗಿ ಸ್ವೀಕರಿಸಿದ್ದೇನೆ. ಈ ಭಾಗದ ಕಳಸಾ-ಬಂಡೂರಿ ನಾಲೆ ಹಾಗೂ ಮಹದಾಯಿ ನದಿ ಜೋಡಣೆ ಸೇರಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುತ್ತೇನೆ ಎಂದು ಸಂಸದ ಜಗದೀಶ ಶೆಟ್ಟರ್ ಭರವಸೆ ನೀಡಿದರು.
ಪಟ್ಟಣದ ಶ್ರೀ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ರಾಮದುರ್ಗ ಮಂಡಲ ನೇತೃತ್ವದಲ್ಲಿ ಸಂಸದ ಜಗದೀಶ ಶೆಟ್ಟರ್, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಪಾಟೀಲ ಅವರಿಗೆ ಶುಕ್ರವಾರ ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಹಣಬಲ, ಅಧಿಕಾರ ಬಲ ನಡೆಯುವುದಿಲ್ಲ ಎಂದು ಜಿಲ್ಲೆಯ ಕಾರ್ಯಕರ್ತರು ತೋರಿಸಿ ಕೊಟ್ಟಿದ್ದಾರೆ. ಸಚಿವೆಯ ಕ್ಷೇತ್ರದಲ್ಲಿಯೇ ಅವರ ಮಗನಿಗೆ ಸುಮಾರು 50 ಸಾವಿರ ಮತ ಕಡಿಮೆ ಆಗಿರುವುದು ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದರು.
ರಾಮದುರ್ಗ ಭಾಗಕ್ಕೆ ರೈಲ್ವೆ ಯೋಜನೆ, ನೀರಾವರಿ, ಶಬರಿಕೊಳ್ಳ ಪ್ರವಾಸಿ ತಾಣವಾಗಿಸುವ ಜತೆಗೆ ಸ್ಥಳೀಯರ ಬೇಡಿಕೆಗಳನ್ನು ಪೂರೈಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಮತ್ತಷ್ಟು ಸಂಘಟಿತರಾಗಿ ಕೆಲಸ ಮಾಡಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಪಕ್ಷವನ್ನು ತಾಯಿಯಂತೆ ಆರಾಧಿಸುವ ಕಾರ್ಯಕರ್ತರ ಪಡೆ ಬಿಜೆಪಿಯಲ್ಲಿದೆ ಎಂಬುದನ್ನು ಚುನಾವಣೆಯಲ್ಲಿ ಸಾಬೀತು ಮಾಡಿದ್ದೇವೆ. ರಾಜ್ಯದಲ್ಲಿ ಮುತ್ಸದ್ದಿ ರಾಜಕಾರಣಿ ಹಾಗೂ ಕೆಎಲ್‌ಇ ಸಂಸ್ಥೆ ಬೆಳೆಸಿದ ಕೋರೆ ಅವರಿಗೆ ಸತ್ಕಾರ ಸಮಾರಂಭ ಏರ್ಪಡಿಸಿದ್ದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ರಾಮದುರ್ಗ ತಾಲೂಕಿನ ಅಭಿವೃದ್ಧಿಗೆ ಜಗದೀಶ ಶೆಟ್ಟರ್ ವಿಶೇಷ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಬೆಳಗಾವಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಂಎಲ್‌ಸಿ ಹಣಮಂತ ನಿರಾಣಿ, ರಮೇಶ ದೇಶಪಾಂಡೆ, ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ಕೊಪ್ಪದ, ಮುಖಂಡರಾದ ಪಿ.ಎಫ್.ಪಾಟೀಲ, ಮಾರುತಿ ಕೊಪ್ಪದ, ಎಸ್.ಎಸ್.ಢವಣ ಇತರರಿದ್ದರು. ಉಮೇಶ ಹಕಾಟಿ ಸ್ವಾಗತಿಸಿದರು. ರವೀಂದ್ರ ಹರವಿ ಪರಿಚಯಿಸಿದರು. ಶಂಕರ ಹುರಕಡ್ಲಿ ರೂಪಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಕೆಎಲ್‌ಇ ಸಂಸ್ಥೆಯನ್ನು ಸಂಸ್ಥಾಪಕರ ಇಚ್ಛೆಯಂತೆ ದೇಶಾದ್ಯಂತ ಬೆಳೆಸಿದ್ದೇನೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಕೆಎಲ್‌ಇ ಅಂಗ ಸಂಸ್ಥೆಗಳು ಇಲ್ಲ. ಮಹಾದೇವಪ್ಪ ಯಾದವಾಡ ನೇತೃತ್ವದಲ್ಲಿ ಜಾಗ ಕೊಡಿಸಿದಲ್ಲಿ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ನಾಳೆಯಿಂದಲೇ ಕಾರ್ಯಪ್ರವೃತ್ತನಾಗುತ್ತೇನೆ ಎಂದು ಭರವಸೆ ನೀಡಿದರು.