ಒತ್ತುವರಿ ತೆರವು ವಿರೋಧಿಸಿ 11ಕ್ಕೆ ಕಳಸ ಬಂದ್

9kls1
Published on

ಕಳಸ: ಮಲೆನಾಡಿನ ಕೃಷಿಕರ ಸಾಗುವಳಿ ಭೂಮಿ ಖುಲ್ಲಾ ಮಾಡುವ ಅರಣ್ಯ ಇಲಾಖೆ ಪ್ರಯತ್ನದ ವಿರುದ್ಧ ಸೆ.11ರಂದು ಬೆಳೆಗಾರ ಸಂಘಟನೆಗಳು ಕಳಸ ಬಂದ್ ಮಾಡಿ ಪ್ರತಿಭಟನೆ ನಡೆಯಲಿದೆ ಹೋರಾಟ ಸಂಘಟಕ ಜಿ.ಕೆ.ಮಂಜಪ್ಪಯ್ಯ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸ ಮತ್ತು ಬಾಳೂರು ಹೋಬಳಿ ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಒಕ್ಕೂಟ ಮತ್ತು ಕಳಸ ತಾಲೂಕು ಒತ್ತುವರಿ ಹೋರಾಟ ಸಮಿತಿ, ಕಳಸದ ಬಹುತೇಕ ರಾಜಕೀಯ ಪಕ್ಷಗಳು ಮತ್ತು ಇತರೆ ಸಂಘಟನೆಗಳ ಆಶ್ರಯದಲ್ಲಿ ಈ ಚಳವಳಿ ನಡೆಯಲಿದೆ. ಮಲೆನಾಡಿನಲ್ಲಿ ಸರ್ಕಾರಿ ಭೂಮಿ ಸಾಗುವಳಿದಾರರಿಗೆ ನೋಟಿಸ್ ನೀಡಲಾಗುತ್ತಿದ್ದು ಭೂಮಿ ಖುಲ್ಲಾ ಮಾಡುವ ಯತ್ನ ಆರಂಭವಾಗಿದೆ. ಇದರಿಂದ ದೊಡ್ಡ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಎಂದರು.
15 ಲಕ್ಷ ಎಕರೆ ಸರ್ಕಾರಿ ಜಮೀನನ್ನು ಸಾಗುವಳಿದಾರರಿಗೆ ಮಂಜೂರು ಮಾಡಬೇಕು.ಕಸ್ತೂರಿರಂಗನ್ ವರದಿ ತಿರಸ್ಕರಿಸಬೇಕು. ಅರಣ್ಯಹಕ್ಕು ಕಾಯ್ದೆಗೆ ತಿದ್ದುಪಡಿ ತಂದು 25 ವರ್ಷ ಸಾಗುವಳಿ ಮಾಡಿದವರಿಗೂ ಹಕ್ಕು ನೀಡಬೇಕು. ವನ್ಯಜೀವಿಗಳ ಉಪಟಳ ತಡೆಯಬೇಕು ಎಂಬ ಬೇಡಿಕೆ ಇರಿಸಿ ಭಾರಿ ಹೋರಾಟ ಮಾಡಲಾಗುತ್ತದೆ. ಕಳಸ ತಾಲೂಕಿನ ರಾಜಕೀಯ ಪಕ್ಷಗಳು, ಹಲವಾರು ಸಂಘಟನೆಗಳು ಬೆಂಬಲ ನೀಡಿದ್ದಾರೆ ಎಂದರು.
11ರಂದು ಕಳಸ ಪಟ್ಟಣ ಬಂದ್, ಪ್ರತಿಭಟನಾ ಸಭೆಗೆ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಸಂಸದರಿಗೂ ಆಹ್ವಾನ ನೀಡಲಾಗಿದೆ. ಸರ್ಕಾರದ ಮಟ್ಟದಲ್ಲಿ ಬೆಳೆಗಾರರ ಪರವಾಗಿ ದನಿ ಎತ್ತರಿಸುವ ಅಗತ್ಯ ಇದೆ ಎಂದು ಅವರಿಗೂ ಮನವರಿಕೆ ಮಾಡುವ ಪ್ರಯತ್ನ ನಡೆಯಲಿದೆ. ಪ್ರತಿಭಟನೆ ದಿನ ವಾಹನ ಸಂಚಾರ ಎಂದಿನಂತೆ ಇದ್ದು, ಅಂಗಡಿ ಮುಂಗಟ್ಟುಗಳು ಬಂದ್ ಇರಲಿದೆ.ಶಾಲಾ ಕಾಲೇಜುಗಳಿಗೆ ಬಂದ್ ಗೆ ಸಹಕರಿಸಲು ತಿಳಿಸಲಾಗಿದೆ.ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್ ಎಂದಿನಂತೆ ಕರ್ತವ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net