ಮಕ್ಕಳಿಗೆ ಓದಿನೊಂದಿಗೆ ದೇಸೀಯ ಕಲೆ ಕಲಿಸಿ

Kalari-1
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಯೋಜಿಸಿದ್ದ ಕಳರಿ ಸಮರ ಕಲೆ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನವನ್ನು ಈಶಪ್ರಿಯ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಮೋಹನದಾಸ ಪರಮಹಂಸ ಸ್ವಾಮೀಜಿ, ಯಶ್​ಪಾಲ್​ ​ಸುವರ್ಣ, ಮೀನಾಕ್ಷಿ ಅಮ್ಮ, ಪಿ.ರಾಮದಾಸ ಮಡ್ಡಣ್ಣಾಯ, ಶ್ರೀಕಾಂತ ಶೆಟ್ಟಿ ಕಾರ್ಕಳ ಇದ್ದರು.
Published on

ಪಾಲಕರಿಗೆ ಅದಮಾರು ಈಶಪ್ರಿಯ ಶ್ರೀ ಕರೆ | ಕಳರಿ ಪಯಟ್​ ಪ್ರದರ್ಶನ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಬಹುತೇಕ ಎಲ್ಲ ಪಾಲಕರೂ ತಮ್ಮ ಮಕ್ಕಳಿಗೆ ಓದುವುದನ್ನು ಬಿಟ್ಟು ಬೇರೇನೂ ಮಾಡಲು ಬಿಡುವುದಿಲ್ಲ. ಇದಷ್ಟೇ ಸಂಸ್ಕಾರವಲ್ಲ. ಓದಿನೊಂದಿಗೆ ಮಕ್ಕಳ ಆರೋಗ್ಯ, ದೇಹ ಸದೃಢವಾಗಿರುವಂತಹ ದೇಸೀಯ ಕಲೆಗಳನ್ನೂ ಕಲಿಯಲು ಅವಕಾಶ ನೀಡಬೇಕು. ಅದರಿಂದ ಅವರು ಸರ್ಥರಾಗುಗುವುದಷ್ಟೇ ಅಲ್ಲದೆ, ಅನಂತ ಫಲಗಳು ಲಭಿಸುತ್ತವೆ ಎಂದು ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಆಡಿಟೋರಿಯಂನಲ್ಲಿ ಅದಮಾರು ಮಠದ ಶ್ರೀಕೃಷ್ಣ ಸೇವಾ ಬಳಗದ ವಿಶ್ವಾರ್ಪಣಮ್​ ಕಾರ್ಯಕ್ರಮದ ನಿಮಿತ್ತ ಶನಿವಾರ ಆಯೋಜಿಸಿದ್ದ ಪದ್ಮಶ್ರೀ ಪುರಸ್ಕೃತ ಗುರು ಮೀನಾಕ್ಷಿ ಅಮ್ಮ ಅವರ ಕಳರಿ ಸಮರ ಕಲೆ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ ಉದ್ಘಾಟಿಸಿ ಆಶೀರ್ವಚನ ನೀಡಿದರು.

Kalari-2
ಅದಮಾರು ಶ್ರೀಗಳು ಮೀನಾ ಅಮ್ಮ ಅವರನ್ನು ಸನ್ಮಾನಿಸಿದರು. ಮಾಣಿಲ ಶ್ರೀ, ಗುರುಪುರ ಶ್ರೀ, ಕೊಂಡೆವೂರು ಶ್ರೀ, ಯಶ್​ಪಾಲ್​ ಸುವರ್ಣ ಇದ್ದರು.

ದುಶ್ಚಟಗಳಿಂದ ದೂರ

ಶಾಲೆಗಳ ಸುತ್ತಲೂ ಈಗ ತಂಬಾಕು ಮುಕ್ತ, ಡ್ರಗ್ಸ್​ ಮುಕ್ತ ಎಂಬ ಫಲಕ ಹಾಕಲಾಗುತ್ತಿದೆ. ಇದರರ್ಥ, ದುಶ್ಚಟಗಳು ಮನೆಯ ಬಾಗಿಲಲ್ಲೇ ನಿಂತಿದೆ ಎನ್ನುವುದಾಗಿದೆ. ಹೀಗಾಗಿ ಮಕ್ಕಳು ದುಶ್ಚಟಗಳಿಂದ ದೂರ ಇರುವಂತಾಗಲು, ಮತಾಂತರದಂತಹ ಪಿಡುಗಿನಿಂದ ಹೊರ ಬರಲು, ಸನಾತನ ಹಿಂದು ಧರ್ಮವನ್ನು ಮುನ್ನಡೆಸಲು, ಸ್ವಯಂ ರಕ್ಷಣೆಗೋಸ್ಕರ ಇಂತಹ ಸಮರ ಕಲೆಯನ್ನು, ದೇಸೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲೆಂದು ಈ ಕಾರ್ಯಕ್ರಮ ಆಯೋಜಿಸಿದ್ದಾಗಿ ತಿಳಿಸಿದರು.

ಉಪನ್ಯಾಸ, ಸನ್ಮಾನ

ಖ್ಯಾತ ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ತೌಳವ ಸಮರ ಪರಂಪರೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಉದ್ಯಮಿ ಪಿ.ರಾಮದಾಸ ಮಡ್ಡಣ್ಣಾಯ ಬೆಂಗಳೂರು ಇವರನ್ನು ಸನ್ಮಾನಿಸಲಾಯಿತು.

ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಯಶ್ಪಾಲ್​ ಸುವರ್ಣ, ಪದ್ಮಶ್ರೀ ಮೀನಾಕ್ಷಿ ಅಮ್ಮ ಉಪಸ್ಥಿತರಿದ್ದರು.

Kalari-5

ಶ್ರೀರಕ್ಷಾ ಹೆಗಡೆ ಪ್ರಾರ್ಥಿಸಿದರು. ಅದಮಾರು ಮಠದ ಮೆನೇಜರ್​ ಗೋವಿಂದರಾಜ್​ ಸ್ವಾಗತಿಸಿದರು. ಓಂಪ್ರಕಾಶ್​ ಭಟ್​ ವಂದಿಸಿದರು. ಸಜನಿ ಸುಬ್ರಹ್ಮಣ್ಯನ್​ ಮಲೆಯಾಳಂನಿಂದ ಕನ್ನಡಕ್ಕೆ ಭಾಷಾಂತರಿಸಿ ಮಾತನಾಡಿದರು. ಅಧ್ಯಾಪಕ ರಾಘವೇಂದ್ರ ರಾವ್​ ಕಾರ್ಯಕ್ರಮ ನಿರೂಪಿಸಿದರು.

ಶಾಲೆಗಳಲ್ಲಿ ಕರಾಟೆಯ ಬದಲು ಕಳರಿ ಕಲಿಸಿ

82ರ ಇಳಿ ವಯಸ್ಸಲ್ಲೂ ಕತ್ತಿ-ಗುರಾಣಿ ಹಿಡಿದು ಕಳರಿ ಸಮರ ಕಲೆಯ ಪ್ರಾತ್ಯಕ್ಷಿಕೆ, ಪ್ರದರ್ಶನ ನೀಡಿದ ಮೀನಾ ಅಮ್ಮ ಹಾಗೂ ದಿನೇಶನ್ ಕಣ್ಣೂರು ತಂಡದವರ ವಿವಿಧ ಪಟ್ಟುಗಳು ಸಭಿಕರನ್ನು ನಿಬ್ಬೆರಗಾಗಿಸಿತು. ಬಳಿಕ ಅವರು ಮಾತನಾಡಿ, ಎಲ್ಲ ಮಕ್ಕಳೂ ವಿಶೇಷವಾಗಿ ಹೆಣ್ಣು ಮಕ್ಕಳು ಈ ಕಲೆ ಕರಗತ ಮಾಡಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ, ಹಿಂಸೆ ತಡೆಯಲು, ಸ್ವಯಂ ರಕ್ಷಣೆಗೆ ಸಹಾಯವಾಗುತ್ತದೆ. ಕೇರಳದಲ್ಲಿ ಈ ಕಲೆಯನ್ನು ಕಲಿಸುತ್ತಿದ್ದು, ಎಲ್ಲ ವಯೋಮಾನದವರೂ ಬರುತ್ತಾರೆ. ಶಾಲೆಗಳಲ್ಲಿ ಮಕ್ಕಳಿಗೆ ಕರಾಟೆ ಕಲಿಸುವ ಬದಲು ದೇಸೀಯ ಸಮರ ಕಲೆಯಾದ ಕಳರಿ ಕಲಿಸುವಂತಾಗಬೇಕು ಎನ್ನುವುದು ನನ್ನ ಆಶಯ ಎಂದರು.

ನಮ್ಮ ಪೂರ್ವಜರು ಕಳರಿ ಸಮರ ಕಲೆಯ ಮೂಲಕ ತೌಳವ ಸಾಮ್ರಾಜ್ಯ ರಕ್ಷಿಸಿದ್ದರು. ಅಸುರಿ ಪ್ರವೃತ್ತಿ ತಡೆಯುವಲ್ಲಿ ಈ ಕಲೆ ಮಹತ್ವದ ಪಾತ್ರವಹಿಸಿತ್ತು. ಅದನ್ನು ಪುನರಾವಲೋಕನ ಮಾಡುವ ಮಹತ್ವದ ಕಾರ್ಯವನ್ನು ಅದಮಾರು ಶ್ರೀಗಳು ಮಾಡಿದ್ದು, ಇಂತಹ ಕಲೆಗಳಿಂದ ಹಿಂದು ಸಮಾಜಕ್ಕೆ ಸದೃಢ ಶಕ್ತಿಯನ್ನು ದೇವರು ಅನುಗ್ರಹಿಸಲಿ. ಮೋಹನದಾಸ ಪರಮಹಂಸ ಸ್ವಾಮೀಜಿ. ಶ್ರೀಧಾಮ, ಮಾಣಿಲ

ಹಿಂದಿನ ಆಚಾರ-ವಿಚಾರಗಳನ್ನು ಇಂದಿನ ಜನರಿಗೆ ತಿಳಿಸಲು ಅದಮಾರು ಶ್ರೀಗಳು ವಿಶ್ವಾರ್ಪಣಮ್​ ಕಾರ್ಯಕ್ರಮದ ಮೂಲಕ ದೇಶದ ಕಲೆ, ಸಂಸ್ಕೃತಿಯನ್ನು ಉಡುಪಿ ಜನರಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷೇತದ ಶಾಸಕನಾಗಿ ನಾನು ಎಲ್ಲ ಜನರ ಪರವಾಗಿ ಶ್ರೀಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಶ್​ಪಾಲ್​ ಸುವರ್ಣ. ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net