

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ವಿದ್ಯಾರ್ಥಿಗಳು ಜ್ಞಾನ, ಉತ್ತಮ ಮನೋಧರ್ಮ, ಕೌಶಲ ಗಳಿಸಿಕೊಂಡು ಸವಾಲುಗಳನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಉಜಿರೆ ಎಸ್‌ಡಿಎಂ ಕಾಲೇಜು ಹಳೇ ವಿದ್ಯಾರ್ಥಿ ಯುವರಾಜ್ ಜೈನ್ ಹೇಳಿದರು.
ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಮಾನವಿಕ ವಿಭಾಗ ಆಯೋಜಿಸಿದ್ದ ‘ಕಲರವ’ ಅಂತರ್ ಕಾಲೇಜು, ಅಂತರ್ ತರಗತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಮಹೇಂದ್ರ ವರ್ಮ ಜೈನ್ ಮಾತನಾಡಿ, ಯಶಸ್ಸು ಲಭಿಸಿದಾಗ ಅತಿಯಾಗಿ ಹಿಗ್ಗದೆ, ಕೆಲಸದಲ್ಲಿ ಗುಣಮಟ್ಟ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಉದ್ಯಮಿಗಳಿಗೆ ಪರಿಸ್ಥಿತಿ ಸದಾ ಒಂದೇ ಆಗಿರುವುದಿಲ್ಲ. ಜೀವನ ನಿರ್ವಹಣೆಗೆ ಪರ್ಯಾಯ ದಾರಿಗಳನ್ನು ಸಜ್ಜಾಗಿರಿಸಿಕೊಂಡಿರಬೇಕು ಎಂದರು.
ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಹಿತ ಬದುಕಿನ ಎಲ್ಲ ಸ್ತರಗಳಲ್ಲಿ ಸುದೃಢರಾಗಿ, ತಮ್ಮಲ್ಲಿರುವ ಕೌಶಲ, ಸಾಮರ್ಥ್ಯ ಸಮರ್ಥ ರೀತಿಯಲ್ಲಿ ಉಪಯೋಗಿಸಿಕೊಂಡು ಬದುಕಬೇಕು ಎಂದರು.
2024ರಲ್ಲಿ ನಡೆದ ಇಂಡೋ-ನೇಪಾಳ್ ಅಂತಾರಾಷ್ಟ್ರೀಯ ಥ್ರೋ ಬಾಲ್ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದ ತೃತೀಯ ಬಿ.ಎ. ವಿದ್ಯಾರ್ಥಿನಿ ಉಷಾ ಕೆ.ಜಿ. ಅವರನ್ನು ಗೌರವಿಸಲಾಯಿತು. ಪ್ರಾಂಶುಪಾಲ, ಅತಿಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜು ಆಡಳಿತಾಂಗ ಕುಲಸಚಿವ ಡಾ.ಶ್ರೀಧರ ಭಟ್, ಕಲಾ ನಿಕಾಯ ಡೀನ್ ಡಾ.ಭಾಸ್ಕರ ಹೆಗಡೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಅಮೀರ್, ವೀಕ್ಷಾ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಡಾ.ಸನ್ಮತಿ ಕುಮಾರ್ ಸ್ವಾಗತಿಸಿದರು. ಮಾನಸ ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು. ದ.ಕ. ಜಿಲ್ಲೆ 10 ಕಾಲೇಜುಗಳಿಂದ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.