

ಮೈಸೂರು: ಅಂಗಳದ ತುಂಬೆಲ್ಲಾ ಪುಟಾಣಿ ಕೃಷ್ಣ, ರಾಧೆಯರ ಕಲರವ, ಸಂಭ್ರಮವೋ ಸಂಭ್ರಮ. ಅಲ್ಲದೇ ನಾನಾ ಭಂಗಿಯಲ್ಲಿ ನಿಂತು ಕ್ಯಾಮರಾಗೆ ಪೋಸ್ ನೀಡಿ ಖುಷಿಪಟ್ಟರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ಯಿಂದ ಜಯಲಕ್ಷ್ಮೀಪುರಂನ ಶ್ರೀ ಸತ್ಯಸಾಯಿ ಬಾಬಾ ಶಿಕ್ಷಣ ಸಂಸ್ಥೆ, ಸರಸ್ವತಿಪುರಂನ ಎಸ್.ಬಿ.ಇಂಟರ್‌ನ್ಯಾಷನಲ್ ಟೂರ್ ಆ್ಯಂಡ್ ಟ್ರಾವೆಲ್ಸ್ ಪ್ರೈ.ಲಿ. ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕೃಷ್ಣ-ರಾಧೆಯರ ವೇಷ ಫೋಟೋ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.
ಪುಟ್ಟ ಪುಟ್ಟ ಕಂಗಳ, ಪುಟಾಣಿಗಳ ಕೃಷ್ಣವೇಷ ಆಕರ್ಷಣೀಯವಾಗಿದ್ದರೆ, ಬಣ್ಣ ಬಣ್ಣದ ವೇಷಭೂಷಣಗಳೊಂದಿಗೆ ಸಿಂಗರಿಸಿದ ಪಾಲಕರು ಮಕ್ಕಳನ್ನು ನೋಡಿ ಸಂತಸಪಟ್ಟರು. ಬಾಲಕೃಷ್ಣ, ಬೆಣ್ಣೆ ಕೃಷ್ಣ, ಮುದ್ದುಕೃಷ್ಣ, ತುಂಟಾಟ ಕೃಷ್ಣ, ಕಿಶೋರಕೃಷ್ಣ, ಶ್ರೀ ಕೃಷ್ಣ, ಗೀತಾ ಕೃಷ್ಣ, ರಾಧಾಕೃಷ್ಣ, ಯಶೋದೆ ಕೃಷ್ಣ, ದೇವಕಿ ಕೃಷ್ಣ, ರಾಧಾ ಮಾಧವ ಸೇರಿದಂತೆ ನಾನಾ ಕೃಷ್ಣ ವೇಷಧಾರಿಗಳು ವೇಷ ತೊಟ್ಟು ಖುಷಿಪಟ್ಟರು. ಅಲ್ಲದೆ, ಒಬ್ಬೊಬ್ಬರೆ ವೇದಿಕೆಗೆ ಬಂದು ಕೃಷ್ಣ, ರಾಧೆ ಯ ಹಾವಭಾವ ಪ್ರದರ್ಶಿಸಿದರು. ಫೋಟೋಗೆ ಪೋಸ್ ನೀಡಿ ನಗೆ ಬೀರಿದರು.
ಶ್ರೀ ಸತ್ಯಸಾಯಿ ಬಾಬಾ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಪ್ರೊ.ಕೆ.ಬಿ.ಪ್ರಭುಪ್ರಸಾದ್ ಸಂದೇಶ ನೀಡಿ, ಮಕ್ಕಳು ಹೇಗೆ ಇದ್ದರೂ, ಏನು ಮಾಡಿದರೂ ಚಂದವೇ. ಪುಟಾಣಿಗಳನ್ನು ನೋಡುವ ಸಂಭ್ರಮವೇ ಬೇರೆ. ಕೃಷ್ಣ, ರಾಧೆ ವೇಷ ತೊಟ್ಟು ಮಕ್ಕಳು ಕಂಗೊಳಿಸುತ್ತಿರುವುದು ಆನಂದ ತಂದಿದೆ ಎಂದರು.
ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಪಾಲಕರಲ್ಲಿ ಸಂತಸ ತರುವ ಇಂತಹ ಕಾರ್ಯಕ್ರಮ ಆಯೋಜಿಸಿರುವ ವಿಜಯವಾಣಿ ಬಳಗಕ್ಕೆ ಧನ್ಯವಾದ ಹೇಳುತ್ತೇನೆ. ಇಂತಹ ಓದುಗರು ಹಾಗೂ ಪತ್ರಿಕೆ ನಡುವೆ ಸಂಬಂಧ ಬೆಸೆಯುವ ಕಾರ್ಯಕ್ರಮಗಳು ಹೆಚ್ಚು ಆಗಲಿ ಎಂದು ಆಶಿಸಿದರು.
ಎಸ್.ಬಿ.ಇಂಟರ್‌ನ್ಯಾಷನಲ್ ಟೂರ್ ಆ್ಯಂಡ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಡೆಟ್ ಮುಖ್ಯಸ್ಥ ಶಾಂತಕುಮಾರ್ ಬಿರಾದಾರ್ ಮಾತನಾಡಿ, ಮಕ್ಕಳಲ್ಲಿ ನಮ್ಮ ಹಿಂದು ಧರ್ಮದ ಸಂಸ್ಕೃತಿ, ಪರಂಪರೆ, ಆಚರಣೆಗಳನ್ನು ಪರಿಚಯಿಸುವ ವಿಜಯವಾಣಿ ಪ್ರಯತ್ನ ಶ್ಲಾಘನೀಯ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಆಚರಣೆಗಳು ಸಂಪ್ರದಾಯಂತೆ ನಡೆದುಕೊಂಡು ಬರುತ್ತಿದ್ದು ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಹಾಗಾಗಿ ಹಬ್ಬ, ವಿಶೇಷ ದಿನಗಳಲ್ಲಿ ವಿಜಯವಾಣಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಹೇಳಿದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಅವರು, ಕೃಷ್ಣ-ರಾಧೆ ವೇಷ ಫೋಟೋ ಸ್ಪರ್ಧೆಯ ವಿಶೇಷತೆ, ನಿಯಮಗಳನ್ನು ವಿವರಿಸಿದರು. ಶ್ರೀ ಸತ್ಯಸಾಯಿ ಬಾಬಾ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಗೋಪಿನಾಥ್, ಖಜಾಂಚಿ ಕೆ.ಸತೀಶ್, ಸತ್ಯಸಾಯಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ತ್ರಿಮೂರ್ತಿ, ಶಾಲೆಯ ಶಿಕ್ಷಕ ವೃಂದ, ಪಾಲಕರು ಇದ್ದರು.