

ಮಂಡ್ಯ: ವಿದ್ಯಾರ್ಥಿಗಳಾದವರು ಗುರುವಿನ ಸಾಧನೆಯನ್ನು ಮೀರಿ ಬೆಳೆಯಬೇಕು. ಆಗ ಶಿಕ್ಷಕರ ಜನ್ಮ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಚಿತ್ರನಟ ಪ್ರಥಮ್ ಹೇಳಿದರು.
ತಾಲೂಕಿನ ಸುಂಡಹಳ್ಳಿ ಸಿದ್ದಯ್ಯನಕೊಪ್ಪಲು ಗೇಟ್ ಬಳಿಯ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾವೇರಿ ಕಲಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಷ್ಯ ಉನ್ನತ ಮಟ್ಟದ ಸಾಧನೆ ಮಾಡಿದರೆ ಆತನನ್ನು ಕಂಡು ಗುರು ಸಂತೋಷ ಪಡುತ್ತಾರೆ. ಇಂತಹ ಸಾಧನೆಯನ್ನು ಪ್ರತಿ ವಿದ್ಯಾರ್ಥಿಗಳೂ ಮಾಡುವ ಮೂಲಕ ತಾನು ಕಲಿತ ಶಾಲೆ, ಕಾಲೇಜಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಮಂಡ್ಯದಲ್ಲಿ ರಾಜಕೀಯ ನಡೆದರೆ ಇಂಡಿಯಾದಲ್ಲೇ ನಡೆದಂತೆ. ಅದೇ ರೀತಿ ಮಂಡ್ಯದಲ್ಲಿ ಸಿನಿಮಾ ಗೆದ್ದರೆ ಇಂಡಿಯಾದಲ್ಲೇ ಗೆದ್ದಂತೆ. ಕಲಾವಿದರನ್ನು ಪ್ರೋತ್ಸಾಹಿಸುವ ಈ ಜಿಲ್ಲೆಯಲ್ಲಿ ಸಿನಿಮಾಗಳನ್ನು ಬೆಳೆಸಬೇಕು. ಆ ಮೂಲಕ ಕಲಾವಿದರನ್ನು ಉಳಿಸಬೇಕು. ಕನ್ನಡ ಚಿತ್ರರಂಗದಲ್ಲಿರುವ ಕಲಾವಿದರು ಇತ್ತೀಚಿನ ದಿನಗಳಲ್ಲಿ ಸೊರಗುವಂತಹ ಪರಿಸ್ಥಿತಿ ಬಂದಿದೆ. ಇದಕ್ಕೆ ಪ್ಯಾನ್ ಇಂಡಿಯಾ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಿನಿಮಾ ಕ್ಷೇತ್ರದಲ್ಲಿ ಕನ್ನಡದ ಕಲಾವಿದರಿಗೆ ಹೆಚ್ಚಿನ ಮಾನ್ಯತೆ ಸಿಗುತ್ತಿಲ್ಲ. ಕನ್ನಡದ ನಟನನ್ನು ಚಿತ್ರತಂಡ ಆಯ್ಕೆ ಮಾಡಿದರೆ, ನಟಿಯನ್ನು ಹೊರ ರಾಜ್ಯದಿಂದ ಕರೆಸಲಾಗುತ್ತದೆ. ಅಷ್ಟೆ ಅಲ್ಲ, ಪೋಷಕ ನಟರನ್ನೂ ಹೊರಗಿನಿಂದ ಕರೆತರುವುದರ ಜತೆಗೆ ತಾಂತ್ರಿಕ ತಜ್ಞರು, ಮೇಕಪ್ ಆರ್ಟಿಸ್ಟ್ ಸೇರಿದಂತೆ ಅಗತ್ಯವಿರುವ ಎಲ್ಲರನ್ನೂ ತಂದು ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಕೇಳಿದರೆ ಪ್ಯಾನ್ ಇಂಡಿಯಾ ಎಂದು ಹೇಳುತ್ತಾರೆ. ಇದು ಕನ್ನಡದ ಕಲಾವಿದರಿಗೆ ಮಾಡುವ ಅಪಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡದ ಚಿತ್ರಗಳಿಗೂ ನಮ್ಮ ವೀಕ್ಷಕರು ಪ್ರೋತ್ಸಾಹ ನೀಡುತ್ತಿಲ್ಲ. ಇದರಿಂದಾಗಿ ಕನ್ನಡ ಚಿತ್ರಗಳು ನೆಲಕಚ್ಚುತ್ತಿವೆ. ದೊಡ್ಡ ದೊಡ್ಡ ಕಲಾವಿದರೆಲ್ಲರೂ ತೆರೆಮರೆಗೆ ಸರಿಯುವಂತಹ ಕಾಲ ಬಂದಿದೆ. ಈಗಿರುವಾಗ ಹೊಸ ಕಲಾವಿದರ ಬೆಳವಣಿಗೆಯಾದರೂ ಹೇಗೆ ಸಾಧ್ಯ?. ಇಂತಹ ಬೆಳವಣಿಗೆಯನ್ನು ಗಮನಿಸಿರುವ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರು ಹೊಸ ಕಲಾವಿದರಿಗೆ ಒಂದಷ್ಟು ವೇದಿಕೆ ಒದಗಿಸುವ ಮೂಲಕ ಪರಿಚಯ ಮಾಡಿಕೊಟ್ಟು ನನ್ನಂತಹ ಅದೆಷ್ಟೋ ಕಲಾವಿದರಿಗೆ ಅದೃಷ್ಟ ದೇವತೆಯಾಗಿ ಕಂಗೊಳಿಸುತ್ತಿದ್ದಾರೆ. ಆದರೂ ಕನ್ನಡ ನಾಡಿನ ಜನತೆ ಚಿತ್ರಮಂದಿರಗಳಲ್ಲೇ ಚಿತ್ರವನ್ನು ವೀಕ್ಷಿಸುವುದರೊಂದಿಗೆ ಹೊಸ ಕಲಾವಿದರನ್ನೂ ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಮನವಿ ಮಾಡಿದರು.
ಚಿತ್ರನಟ ಆದಿ ಲೋಕೇಶ್ ಮಾತನಾಡಿ, ಕನ್ನಡ ಚಿತ್ರವನ್ನು ನೋಡುವ ಮೂಲಕ ಅವುಗಳನ್ನು ಬೆಳೆಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಒಂದು ಚಿತ್ರ ಉನ್ನತ ಮಟ್ಟದ ಯಶಸ್ಸು ಕಂಡಲ್ಲಿ ಅದರ ಹಿಂದೆ ಕೆಲಸ ಮಾಡಿದ ಅದೆಷ್ಟೋ ಜನರ ಪರಿಶ್ರಮಕ್ಕೂ ಅರ್ಥ ಬರುತ್ತದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಪಿ.ರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರೊ.ಟಿ.ನಾಗೇಂದ್ರ, ಪ್ರಾಂಶುಪಾಲ ಡಾ.ಎ.ಎಸ್. ಶ್ರೀಕಂಠಪ್ಪ, ಉಪ ಪ್ರಾಂಶುಪಾಲ ಮಂಜುನಾಥ್, ಡಾ.ತಮ್ಮಣ್ಣ, ಸೌಮ್ಯ ಲೋಕೇಶ್ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.