

ಮಡಿಕೇರಿ:
ಸ್ಥಳೀಯ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ 79ನೇ ಸ್ವಾತಂತ್ರ‍್ಯ ದಿನವನ್ನು ಶುಕ್ರವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಾಡಿನ ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗದಂತೆ ಪೋಷಕರು ವಹಿಸಬೇಕಾದ ಎಚ್ಚರಿಕೆಗಳ ಕುರಿತು ವಿಶೇಷ ಸಂದೇಶ ನೀಡಲಾಯಿತು. ಜತೆಗೆ ಸ್ವಚ್ಛ ಮತ್ತು ನಿರ್ಮಲ ಸಮಾಜ ನಿರ್ಮಾಣದ ಬಗ್ಗೆಯೂ ಸಭಿಕರಿಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಕೆ. ಬಿ. ಸೂರ್ಯ ಕುಮಾರ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾ ವೇದಿಕೆಯ ಅಧ್ಯಕ್ಷರಾದ ಆರ್. ಮಹೇಶ್ (ಅಪ್ಪು) ವಹಿಸಿದ್ದರು. ಗೌರವ ಅತಿಥಿಗಳಾಗಿ ನಿವೃತ್ತ ಸೇನಾನಿ ನಂದಿರ ಅಯ್ಯಪ್ಪ, ಪ್ರದೀಪ್ ಪಾಯಸ್, ಸಾಧಿಕ್ ಪಾಷಾ ಹಾಗೂ ನಗರಸಭಾ ಸದಸ್ಯ ಕೆ. ಎಸ್. ರಮೇಶ್ ಪಾಲ್ಗೊಂಡಿದ್ದರು.
ಶುಭ ಸಂದರ್ಭದಲ್ಲಿ ವೇದಿಕೆಯ ಮಹಿಳಾ ಘಟಕದ ಸದಸ್ಯರು ದೇಶಭಕ್ತಿ ಗೀತೆಗಳನ್ನು ಹಾಡಿ ಎಲ್ಲರ ಗಮನ ಸೆಳೆದರು. ಅಲ್ಲದೆ, ದೇಶಕ್ಕಾಗಿ ವೀರ ಮರಣ ಹೊಂದಿದ ಯೋಧರಿಗೆ ನಮನ ಸಲ್ಲಿಸಲಾಯಿತು.