ಕಲಾನಗರ ಸಾಂಸ್ಕೃತಿಕ ವೇದಿಕೆಯಿಂದ ಸಾಧಕರಿಗೆ ಸನ್ಮಾನ

sanmana
Published on

ಮಡಿಕೇರಿ: ದೀಪಾವಳಿ ಹಬ್ಬದ ಪ್ರಯುಕ್ತ ಮಡಿಕೇರಿಯ ಕಲಾನಗರ ಸಾಂಸ್ಕೃತಿಕ ವೇದಿಕೆ ವತಿಯಿಂದ ೧೧ನೇ ವರ್ಷದ ದೀಪಾವಳಿ ಉತ್ಸವ ಸಂಭ್ರಮ ಸಡಗರದಿಂದ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಸಮಾಜ ಸೇವಕ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಡಿಕೇರಿಯ ಕಲಾನಗರಕ್ಕೆ ಆಗಮಿಸಿದ್ದು, ಬಹಳ ಸಂತೋಷವಾಗಿದೆ. ನಾನೂ ರಾಜ್ಯದ ಬೇರೆ ಬೇರೆ ಭಾಗಗಳಿಗೆ ತೆರಳಿ ನೀರಿನಲ್ಲಿ ಮುಳುಗಿದ್ದ ಶವ ಹೊರ ತೆಗೆದಿದ್ದೇನೆ. ಕಳೆದ ವರ್ಷ ಕೂಡ ಇಲ್ಲಿಗೆ ಬಂದು ಶವವನ್ನು ಹೊರ ತೆಗೆದಿದ್ದೇನೆ. ಈ ಒಂದು ಸಣ್ಣ ಸಮಾಜಮುಖಿ ಕಾರ್ಯವನ್ನು ಗುರುತಿಸಿ ನನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಬಹಳ ಸಂತಸ ತಂದಿದೆ. ಕಲಾನಗರದಲ್ಲಿ ಕಲಾ ರಸಿಕರೆ ಇದ್ದು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ಮತ್ತಷ್ಟು ಸಾಧನೆ ಮಾಡಲೆಂದು ಹಾರೈಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜ ಸೇವಕ ಮುಳುಗು ತಜ್ಜ ಈಶ್ವರ್ ಮಲ್ಪೆ ಹಾಗೂ ವಯನಾಡು ದುರಂತದ ಕುರಿತು ಪ್ರತ್ಯಕ್ಷ ವರದಿಗಾರಿಕೆ ಮಾಡಿದ್ದ ಕೊಡಗಿನ ಪತ್ರಕರ್ತರಾದ ಎಂ.ಆರ್.ಲೋಹಿತ್, ಕ್ಯಾಮರ ಮೆನ್ ಮನೋಜ್, ಎನ್.ಸಿ.ಪ್ರಜ್ವಲ್, ನಗರದ ಸ್ವಚ್ಚತಾ ಕಾರ್ಯದಲ್ಲಿ ಶ್ರಮಿಸುತ್ತಿರುವ ನಗರಸಭೆಯ ರಂಗಪ್ಪ, ಆರೋಗ್ಯ ಇಲಾಖೆಯ ಪ್ರತಿಮಾ ರೈ, ಅಣ್ಣಯ್ಯ, ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಳಿಕ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಮಕ್ಕಳ ಮಂಟಪ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಮಹೇಶ್ ಕುಮಾರ್, ಆಕಾಶವಾಣಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ, ಕಲಾನಗರ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಮಹೇಶ್, ಪ್ರಮುಖರಾದ ಆಶಾ ನಟರಾಜ್, ಚಂದ್ರು, ಕೆ.ಎಸ್.ರಮೇಶ್, ಕೋಡಿ ಭರತ್, ತಿಲಖ್ ಸಿಂಗ್ ಕುಮಾರ್, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net