

ಮಡಿಕೇರಿ: ಕಲಾಕಾವ್ಯ ನಾಟ್ಯ ಶಾಲೆಯ ಏಳನೇ ವರ್ಷದ ವಾರ್ಷಿಕೋತ್ಸವ ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಗಳಾದ ಸಾಹಿತಿ ಮಿಲನ ಭರತ್ ಹಾಗೂ ಯೋಗ ಗುರು ಶಿಲ್ಪ ರವೀಂದ್ರ ರೈ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಮಿಲನಾ ಭರತ್, ಒಂದು ನಾಟ್ಯಶಾಲೆಯನ್ನು ಸ್ಥಾಪಿಸುವುದು ಸುಲಭದ ವಿಷಯವಲ್ಲ. ತಾನು ಕಲಿತು ಬಳಿಕ ಇತರರಿಗೆ ಆ ವಿದ್ಯೆಯನ್ನು ಧಾರೆಯೆರೆಯಬೇಕಾಗಿರುತ್ತದೆ. ಇದಕ್ಕೆ ಬಹಳ ಆತ್ಮಸ್ಥೈರ್ಯದ ಅಗತ್ಯವಿರುತ್ತದೆ. ಕಾವ್ಯಶ್ರೀ ಅವರು ಎಲ್ಲವನ್ನೂ ಮೀರಿ ಈ ಶಾಲೆಯನ್ನು ಕಟ್ಟಿದ್ದಾರೆ. ಅವರ ಸಾಧನೆ ನಿಜಕ್ಕೂ ಅಭಿನಂದನೀಯ ಎಂದರು.
ಯೋಗ ಗುರು ಶಿಲ್ಪಾ ರವೀಂದ್ರ ರೈ ಮಾತನಾಡಿ, ಇಂದು ಭಾರತೀಯ ನೃತ್ಯಕಲೆ ಕಲಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಕುಂಠಿತವಾಗುತ್ತಿದೆ. ಜನರು ಆಸಕ್ತಿ ಕಳೆದುಕೊಳ್ಳುತ್ತಿರುವುದು ಇದಕ್ಕೆ ಮೂಲ ಕಾರಣ. ಆದರೆ, ಕಾವ್ಯಶ್ರೀ ಅವರು ದಕ್ಷಿಣ ಭಾರತದ ಪ್ರಮುಖ ನೃತ್ಯ ಪ್ರಕಾರವಾದ ಭರತನಾಟ್ಯದ ಮೇಲಿಟ್ಟಿರುವ ಗೌರವ, ಅಭಿಮಾನ ನಿಜಕ್ಕೂ ಮೆಚ್ಚುವಂತದ್ದು. ಈ ನೃತ್ಯಶಾಲೆ ಸ್ಥಾಪಿಸಲು ಅವರು ಅಂದು ಇಟ್ಟ ದಿಟ್ಟ ಹೆಜ್ಜೆ ಇಂದು ಹೆಮ್ಮರವಾಗಿದೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲೆಂದು ಹಾರೈಸಿದರು.
ವಿದೂಷಿ ಕಾವ್ಯಶ್ರೀ ಕಪಿಲ್ ಮಾತನಾಡಿ, ಇಂದಿನ ಯುವಜನತೆ ಸಂಸ್ಕೃತಿದತ್ತವಾಗಿ ಬಂದ ಕಲಾ ಪ್ರಕಾರಗಳನ್ನು ತ್ಯಜಿಸಿ ಆಧುನಿಕ ನೃತ್ಯ ಕಲೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಆದರೆ, ಭಾರತೀಯ ಸಂಸ್ಕೃತಿಯನ್ನು ಸದಾ ಉನ್ನತಿಗೆ ಕೊಂಡೊಯ್ಯುವುದು ಇಲ್ಲಿನ ಭರತನಾಟ್ಯದಂತಹ ಕಲಾ ಪ್ರಕಾರಗಳು. ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕೃತಿಯ ಹಿರಿಮೆಯನ್ನು ಧಾರೆಯೆರೆಯಬೇಕಿದೆ ಎಂದರು.
ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ನಡೆಸಿದ ಭರತನಾಟ್ಯ ಪರೀಕ್ಷೆಯಲ್ಲಿ ಕಲಾಕಾವ್ಯ ನಾಟ್ಯಶಾಲೆಯ ವಿದ್ಯಾರ್ಥಿ ಮಂಡೀರ ಯುಕ್ತಾನ್ ನೀಲಮ್ಮ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗು ಐದು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಮತ್ತು ಇತರ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಅವರನ್ನು ಗೌರವಿಸಲಾಯಿತು.
ನಾಟ್ಯಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಹದಿನೆಂಟು ನೃತ್ಯಗಳ ವೈಭವ ನೆರೆದ ಜನರ ಕಣ್ಮನಗಳನ್ನು ತಣಿಸಿತು. ತೊಂಭತ್ತಾರು ಮಕ್ಕಳ ೭,೭೭೬ ಗೆಜ್ಜೆಯ ನಾದ ಹೊಸ ಲೋಕವನ್ನೇ ಸೃಷ್ಟಿಸಿದಂತಿತ್ತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪ್ರವೀಣ್, ಪ್ರಮುಖರಾದ ದುಗ್ಗಳ ಕಪಿಲ್, ಸೂರ್ತಲೆ ಸೋಮಣ್ಣ, ನವೀನ್ ಅಂಬೆಕಲ್ಲು, ರೋಟರಿ ವಿಸ್ಟಿ ಹಿಲ್ಸ್ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಹಾಜರಿದ್ದರು.