

ಗಜೇಂದ್ರಗಡ: ಪಟ್ಟಣದಲ್ಲಿ ತಹಸೀಲ್ದಾರ್‌ಗೆ ವೈಯಕ್ತಿಕ ನಿಂದನೆ ಮಾಡಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕಂದಾಯ ಇಲಾಖೆ ನೌಕರರ ತಾಲೂಕು ಘಟಕದಿಂದ ಮಂಗಳವಾರ ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಅವರ ಮೂಲಕ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ರಾಜ್ಯದ ರೈತರ, ದೇವಾಲಯ ಹಾಗೂ ಮಠಗಳ ಆಸ್ತಿಗಳ ಉತಾರದಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಿಸುತ್ತಿರುವ ಕುರಿತು ರಾಜ್ಯ ಸರ್ಕಾರದ ನಡೆ ಖಂಡಿಸಿ ಮಾಜಿ ಸಚಿವ ಕಳಕಪ್ಪ ಬಂಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲು ಕಚೇರಿ ಮುಂದೆ ಬಂದು, ಕರ್ತವ್ಯನಿರತ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಸಾರ್ವಜನಿಕರ ಎದುರು ಏಕವಚನದಲ್ಲಿ ನಿಂದಿಸಿ, ಕಂದಾಯ ಇಲಾಖೆಯ ಅಧಿಕಾರಿ /ನೌಕರರಿಗೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ತೊಂದರೆಯುಂಟು ಮಾಡಿದ್ದಾರೆ. ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ ನೌಕರರಿಗೆ ತೊಂದರೆ ನೀಡಿದ್ದಾರೆ. ಕರ್ತವ್ಯ ನಿರ್ವಹಿಸಲು ಅಡ್ಡಿಯಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಇದರಿಂದ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ರಕ್ಷಣೆ ಇಲ್ಲದಂತಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮೂಲಕ ಒತ್ತಾಯಿಸಿದರು.
ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ ಪಿ.ಬಿ. ಶಿಂಗ್ರಿ, ಆಹಾರ ನಿರೀಕ್ಷಕ ಉಮೆಶ ಅರಳಿಗಿಡದ, ಪಿ.ಬಿ. ಮಾಲೀಪಾಟೀಲ, ಕೆ.ವೈ. ಕುಷ್ಟಗಿ, ಶಾಹೀನ್ ಗುರಿಕಾರ, ವೈಭವಿ ಚೌಧರಿ, ಸೌಮ್ಯಾ ಕರಬುದಿ, ಮಾರುತಿ ಅವಧೂತ, ಶರಣಪ್ಪ ತಳವಾರ, ಯಲ್ಲಮ್ಮ ಬಾರಕೇರ ಸೇರಿ ಇತರರಿದ್ದರು.