

ಗಜೇಂದ್ರಗಡ: ಭಕ್ತರ ಆರಾಧ್ಯದೈವ, ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕಾಲಕಾಲೇಶ್ವರನ ಕಾರ್ತಿಕೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ ಸ್ವಯಂಭೂಲಿಂಗರೂಪಿಯಾಗಿರುವ ಕಾಲಕಾಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆ ಬಳಿಕ ಪಲ್ಲಕ್ಕಿ ಸೇವೆ ನಡೆಯಿತು. ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಲ್ಲಿನ ದೀಪಸ್ತಂಭದ ಮೇಲೆ ಎಣ್ಣೆಯಲ್ಲಿ ನೆನೆಸಿದ ಹತ್ತಿಕಾಳಿನಿಂದ ತಯಾರಿಸಿದ ಗಂಟುಗಳನ್ನು ಹಚ್ಚಿ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ದೇವಸ್ಥಾನದ ಮೆಟ್ಟಿಲು, ಆವರಣದಲ್ಲಿ ದೀಪಗಳನ್ನು ಬೆಳಗಿಸಿ ಭಕ್ತಿ ಮೆರೆದರು. ಪ್ರಕೃತಿಯ ಮಡಿಲಲ್ಲಿ ಬೆಟ್ಟದ ಪಡಿಯಲ್ಲಿರುವ ದೇವಸ್ಥಾನದಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಿದ್ದರಿಂದ ಇಡೀ ಪರಿಸರ ವರ್ಣಮಯವಾಗಿತ್ತು. ಸುತ್ತಲಿನ ಊರುಗಳಿಂದ ಸಾವಿರಾರು ಭಕ್ತರು ಕುಟುಂಬ ಸಮೇತ ಬಂದು ಕಾರ್ತಿಕ ಹಚ್ಚಿ ದೇವರ ದರ್ಶನ ಪಡೆದು ಪುನೀತರಾದರು.