

ಸಿಂದಗಿ: ಪಟ್ಟಣದ ಬಸವನಗರದಲ್ಲಿನ ಸಂಗಮ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಗುರುವಾರ ನಡೆದ ಮಾಧ್ಯಮ ಸಂವಾದ ಗೋಷ್ಠಿಯಲ್ಲಿ ತಾಲೂಕಿನ ಕಲಹಳ್ಳಿ, ಬಬಲೇಶ್ವರ ಗ್ರಾಮದ ಮಹಿಳೆಯರು ನರೇಗಾ, ಶೌಚಗೃಹ, ಕುಡಿಯುವ ನೀರು, ಅಂಗನವಾಡಿ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು.
ಬಬಲೇಶ್ವರ ಗ್ರಾಮದ ಅನಸೂಬಾಯಿ ಪೂಜಾರಿ ಮಾತನಾಡಿ, ಗ್ರಾಮದಲ್ಲಿ ಮಹಿಳೆಯರಿಗೆ ಶೌಚಗೃಹದ ಸಮಸ್ಯೆ ಎದುರಾಗಿದೆ. ಇಲ್ಲಿ ಗಂಡಸರು ಹಾಗೂ ಮಹಿಳೆಯರು ಒಂದೇ ರಸ್ತೆಗೆ ಶೌಚಕ್ಕೆ ತೆರಳಬೇಕಾಗಿದೆ. ಊರಿನ ಹೆಣ್ಣು ಮಕ್ಕಳಿಗೆ ಮರ್ಯಾದೆಯೇ ಇಲ್ಲದಂತಾಗಿದೆ ಎಂದು ದೂರಿದರು.
ಬಡಾವಣೆಯ ಚರಂಡಿಗಳು ಸ್ವಚ್ಛತೆ ಕಂಡಿಲ್ಲ. ವೃದ್ಧರು ಇನ್ನೊಬ್ಬರ ಆಸರೆ ಇಲ್ಲದೆ ಹೋದರೆ ರಸ್ತೆಗಿಳಿಯುವುದು ತಲೆ ನೋವಾಗಿದೆ. ಊರಲ್ಲಿನ ಅಕ್ರಮ ಸಾರಾಯಿ ಅಂಗಡಿ ಕಾಟದಿಂದ ಯುವಕರು ಬಲಿಯಾಗುತ್ತಿದ್ದು, ಕೆಲವರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಸಮಸ್ಯೆಗಳಿಗೆ ಪರಿಹಾರ ಆಗುವಂತೆ ಮಾಡಬೇಕು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.
ಸುಶೀಲಾ ದೊಡಮನಿ ಮಾತನಾಡಿ, ಕಳೆದ ಎರಡು ವರ್ಷದ ಹಿಂದೆ ನರೇಗಾದಡಿ ಕೆಲಸ ಮಾಡಿದ ನಮಗೆ ಬಿಲ್ ಸಮಸ್ಯೆ ತಲೆದೋರಿರಲಿಲ್ಲ. ಆದರೆ ಈಗ ಆರು ದಿನದ ಕೂಲಿಗೆ ಮೂರು ದಿನದ ಬಿಲ್ ಪಾವತಿ ಮಾಡಲಾಗುತ್ತಿದೆ. ಒಮ್ಮೊಮ್ಮೆ ಕೆಲಸದ ಪುಸ್ತಕದಲ್ಲಿ ಆಳುಗಳ ಸಂಖ್ಯೆಯನ್ನೂ ಕಡಿತಗೊಳಿಸುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಗ್ರಾಮದಿಂದ ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಇಲ್ಲದ ಕಾರಣ ಮಕ್ಕಳು ಕನಿಷ್ಠ 3 ಕಿ.ಮೀ. ನಡೆದುಕೊಂಡೇ ಹೋಗಬೇಕು. ಕುಡಿವ ನೀರು ಸಮರ್ಪಕವಾಗಿ, ಯೋಗ್ಯವಾಗಿ ಸಿಗುತ್ತಿಲ್ಲ. ಇರುವ ಅಂಗನವಾಡಿಯೂ ದುರಸ್ತಿ ಕಾಣದೇ ಮಳೆಯಿಂದ ಸೋರುತ್ತಿದೆ. ಅಂಗನವಾಡಿಯಲ್ಲಿನ ಆಹಾರ ಸಾಮಗ್ರಿ ಹಾಳಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕಣ್ಣೆತ್ತಿಯೂ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಹಳ್ಳಿ ಗ್ರಾಮದ ಶಾಂತಾಬಾಯಿ ಪೂಜಾರಿ ಮಾತನಾಡಿ, ಗ್ರಾಮದಲ್ಲಿನ ಅಂಗನವಾಡಿಗೆ ಕಟ್ಟಡವಿಲ್ಲದೆ ಮಕ್ಕಳು ಬಿಸಿಲು, ಗಾಳಿ, ಮಳೆಯಲ್ಲಿ ಬಯಲಲ್ಲಿಯೇ ಕುಳಿತುಕೊಳ್ಳುತ್ತಿದ್ದಾರೆ. ಅಂಗನವಾಡಿ ಕಟ್ಟಡಕ್ಕೆ ಸ್ಲಾೃಬ್ ಕೂಡ ಹಾಕಿಲ್ಲ. ನಮಗೆ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ದುಡಿದ ಕೂಲಿಯನ್ನೂ ಕೊಡುತ್ತಿಲ್ಲ ಎಂದು ದೂರಿದರು.
ಸಂಸ್ಥೆಯ ಸಹಾಯಕ ನಿರ್ದೇಶಕ ಫಾ.ಸಂತೋಷ, ಸಿಂಥಿಯಾ ಡಿ.ಮೆಲ್ಲೋ, ಮಲಕಪ್ಪ ಹಲಗಿ, ಆನಂದ ಬಬಲೇಶ್ವರ ಹಾಗೂ ಕಲಹಳ್ಳಿ ಗ್ರಾಮದ ಮಲ್ಲಮ್ಮ ನಾಟೀಕಾರ, ನಾಗಮ್ಮ ಪೂಜಾರಿ, ಮಡಿವಾಳಪ್ಪ ಯಡ್ರಾಮಿ, ರತ್ನಾಬಾಯಿ ಹೊಸಮನಿ, ಅಕ್ಕಮ್ಮ ಪೂಜಾರಿ, ರೇಣುಕಾ ಹೊಸಮನಿ ಇತರರಿದ್ದರು.