

ಕಲಘಟಗಿ: ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿರುವ ಸಂದರ್ಭದಲ್ಲೇ ಮಂಗಳವಾರ ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವಿಡಿಯೋವೊಂದು ಸಾಕಷ್ಟು ವೈರಲ್ ಆಗಿದೆ.
ಮಲಕನಕೊಪ್ಪ ತೋಟದ ಮನೆಯೊಂದರಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಚಿರತೆ ತಿಂದು ಹೋಗಿತ್ತು. ಹೀಗಾಗಿ, ಚಿರತೆ ಸೆರೆಗೆ ಅರಣ್ಯ ಇಲಾಖೆಯು ಬೋನು ಕೂಡ ಇಟ್ಟಿದೆ. ಜನತೆ ಚಿರತೆ ಭಯದಲ್ಲಿ ಇರುವಾಗ ಯಾರೋ ಕಿಡಿಗೇಡಿಗಳು ಹರಿಬಿಟ್ಟ ಹಳೆಯ ವಿಡಿಯೋವೊಂದು ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು.
ಚಿರತೆ ಕುರಿತು ವೈರಲ್ ಆಗಿರುವ ವಿಡಿಯೋ ಗಮನಿಸಿದ ವಲಯ ಅರಣ್ಯ ಅಧಿಕಾರಿ ಅರುಣಕುಮಾರ ಅಷ್ಟಗಿ ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿಡಿಯೋದಲ್ಲಿರುವ ಸ್ಥಳ ಹಾಗೂ ಚಿರತೆ ಪ್ರತ್ಯಕ್ಷವಾಗಿದೆ ಎನ್ನಲಾದ ಸ್ಥಳಕ್ಕೂ ಯಾವುದೇ ಹೊಂದಾಣಿಕೆ ಆಗಿಲ್ಲ. ವಿಡಿಯೋ ಪರಿಶೀಲಿಸಿದಾಗ ಅದು ಹಳೆಯ ವಿಡಿಯೋ ಎಂದು ಗೊತ್ತಾಗಿದೆ.
ಮಲಕನಕೊಪ್ಪ, ತಬಕದಹೊನ್ನಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಸತ್ಯ. ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದೆ. ಸುಳ್ಳು ವಿಡಿಯೋ ಹರಿ ಬಿಡುವುದರಿಂದ ಕಾರ್ಯಾಚರಣೆಗೆ ಅಡ್ಡಿ ಆಗುತ್ತದೆ. ಮುಂದೆ ಇಂತಹ ಘಟನೆ ಕಂಡುಬಂದಲ್ಲಿ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಅರುಣಕುಮಾರ ಅಷ್ಟಗಿ ತಿಳಿಸಿದ್ದಾರೆ.