ಮಸಣಕ್ಕೆ ದಾರಿ ಕಲಘಟಗಿ ರಾಷ್ಟ್ರೀಯ ಹೆದ್ದಾರಿ

Kalaghatagi Road problem
Published on

ಕಲಘಟಗಿ: ಪಟ್ಟಣದಲ್ಲಿ ನಿರ್ವಣಗೊಂಡಿರುವ 4 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಕಬ್ಬಿಣದ ಸರಳುಗಳು ಹೊರ ಬಂದಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಸಿಮೆಂಟ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದಕ್ಕೆ ಇದೊಂದು ಸಾಕ್ಷಿಯಾಗಿದೆ.

2018ರಲ್ಲಿ ಪಟ್ಟಣದ ತಡಸ ಕ್ರಾಸ್​ನಿಂದ ಹಾದು ಹೋಗಿ ಹೊರವಲಯದ ಶೆಟ್ಟಿ ಲಂಚ್​ವರೆಗೆ ರಾಷ್ಟ್ರೀಯ ಹೆದ್ದಾರಿ ಮರು ನಿರ್ವಣಗೊಂಡಿದೆ. ಕಾಮಗಾರಿಯು ಅಂದಾಜು 36 ಕೋಟಿ ರೂ. ಗಳ ವೆಚ್ಚದ್ದಾಗಿದೆ. ಗುತ್ತಿಗೆದಾರ ಪಿ.ಬಿ. ಇಬ್ರಾಹಿಂ ಎಂಬುವವರಿಗೆ ರಸ್ತೆ ಕಾಮಗಾರಿ ನೀಡಲಾಗಿತ್ತು. ಸಾಕಷ್ಟು ಸಮಯ ತೆಗೆದುಕೊಂಡು ಮುಗಿದ ಕೆಲಸ ವಾಹನದವರಿಗಂತೂ ಸಮಾಧಾನ ನೀಡಿರಲಿಲ್ಲ. ನಿರೀಕ್ಷೆಗಿಂತ ಬಹಳ ಬೇಗ ಎಲ್ಲೆಂದರಲ್ಲಿ ತಗ್ಗು-ಗುಂಡಿಗಳು ಬಿದ್ದಿವೆ. ತಡಸ ಕ್ರಾಸ್ ಬಳಿ ಇರುವ ರಸ್ತೆ ಮಧ್ಯದ ಕೆಳಸೇತುವೆ ಮೇಲೆ ಹಾಕಲಾಗಿರುವ ಕಬ್ಬಿಣದ ಸರಳುಗಳು ಹೊರ ಬಂದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಅತಿಯಾಗಿ ಮಳೆ ಸುರಿದರೆ ರಸ್ತೆಯುದ್ದಕ್ಕೂ ನೀರು ನಿಲ್ಲುತ್ತದೆ. ಕೆಲವೆಡೆ ರಸ್ತೆ ಪಕ್ಕದಲ್ಲಿ ನಿರ್ಮಾಣ ಮಾಡಲಾದ ಕಾಲುವೆಗಳ ಕಾಮಗಾರಿ ಅಲ್ಲಲ್ಲಿ ಸ್ಥಗಿತಗೊಂಡು, ಕಾಲುವೆಯಿಂದ ಹೋಗಬೇಕಾದ ಮಳೆ ಮತ್ತು ಗಟಾರು ನೀರು ರಸ್ತೆ ಮೇಲೆಯೇ ಹರಿಯುತ್ತದೆ. ರಸ್ತೆ ಮಧ್ಯ ಭಾಗದಲ್ಲಿ ನಿಲ್ಲಿಸಲಾಗಿರುವ ವಿದ್ಯುತ್ ಕಂಬಗಳಲ್ಲಿ ಸಮರ್ಪಕ ವಿದ್ಯುತ್ ಕನೆಕ್ಷನ್ ಇಲ್ಲದೆ ರಾತ್ರಿ ಕಗ್ಗತ್ತಲಲ್ಲಿ ಪಾದಚಾರಿಗಳು ಸೇರಿದಂತೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಪ್ರಾಣ ಭಯದಲ್ಲಿ ಸಂಚಾರ

ತಡಸ ಕ್ರಾಸ್, ಮಡಕಿ ಹೊನ್ನಳ್ಳಿ ಕ್ರಾಸ್, ಆಂಜನೇಯ ಸರ್ಕಲ್, ಮಾಚಾಪುರ ತಾಂಡಾದ ಹತ್ತಿರ ರಸ್ತೆ ಕೆಳೆಗೆ ನಿರ್ವಿುಸಲಾದ ಸೇತುವೆ ಮೇಲ್ಭಾಗದ ಸಿಮೆಂಟ್ ಸಂಪೂರ್ಣ ಕಿತ್ತು ಹೋಗಿ ಕಬ್ಬಿಣದ ಸರಳುಗಳು ಎದ್ದು ನಿಂತಿವೆ. ವೇಗವಾಗಿ ಬರುವ ಬೈಕ್ ಸವಾರರು ಹೊಂಡ ಕಾಣದೆ ಬಿದ್ದು ಕೈ-ಕಾಲು ಮುರಿದುಕೊಳ್ಳುವುದು ಗ್ಯಾರಂಟಿ. ಹಲವರು ಹೊಂಡದಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆಗಳೂ ನಡೆದಿವೆ. ರಸ್ತೆ ಮಧ್ಯದ ವಿದ್ಯುತ್ ಕಂಬಗಳ ಕೆಳ ಭಾಗದಲ್ಲಿ ನಿರ್ವಿುಬೇಕಿದ್ದ ಗಾರ್ಡನ್ ಕನಸು ನನಸಾಗಿಲ್ಲ. ಜಾನುವಾರುಗಳು ಮೇಯಲು ಹೋಗಿ ಸಾವೀಗೀಡಾಗುತ್ತಿವೆ.

ಮಧ್ಯಾಹ್ನ ದೀಪ, ರಾತ್ರಿ ಕತ್ತಲು!

ರಾತ್ರಿ ವೇಳೆ ಹತ್ತಬೇಕಿದ್ದ ವಿದ್ಯುದ್ದೀಪಗಳು ಮಧ್ಯಾಹ್ನವೇ ಉರಿದು ಇಂಧನ ವ್ಯರ್ಥವಾಗುತ್ತದೆ. ವಿಶೇಷ ಎಂದರೆ, ರಾತ್ರಿಯಾಗುತ್ತಿದ್ದಂತೆ ಆ ದೀಪಗಳು ಬಂದ್ ಆಗುತ್ತವೆ. ಹೀಗಾಗಿ ಕಗ್ಗತ್ತಲು ಆವರಿಸಿ ಸಾರ್ವಜನಿಕರಿಗೆ ತೊಂದರೆ ಉಚಿತವಾಗಿದೆ! ಆಗೊಮ್ಮೆ ಈಗೊಮ್ಮೆ ಬಲ್ಬ್​ಗಳು ಉರಿದು ಕ್ಷಣಾರ್ಧದಲ್ಲಿ ಆರಿಹೋಗುವ ಮೂಲಕ ಸರ್ಕಾರಿ ವ್ಯವಸ್ಥೆಯ ಪರಿಸ್ಥಿತಿಯನ್ನು ಸಾರಿ ಹೇಳುತ್ತವೆ.

ಕರೆಗೆ ಎಚ್ಚೆತ್ತು ಎಂ ಸ್ಯಾಂಡ್ ಹಾಕಿದರು!

ರಸ್ತೆ ಅವ್ಯವಸ್ಥೆ ಕುರಿತು ಅಭಿಪ್ರಾಯ ಪಡೆಯಲು ‘ವಿಜಯವಾಣಿ’ಯಿಂದ ಕರೆ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು, ಬುಧವಾರ ಮಧ್ಯಾಹ್ನದ ವೇಳೆಗೆ ಟ್ರ್ಯಾಕ್ಟರ್ ಮೂಲಕ ಎಂ ಸ್ಯಾಂಡ್ ತಂದು ಹಾಕಿ ಗುಂಡಿ ಮುಚ್ಚುವ ಕೆಲಸದಲ್ಲಿ ನಿರತರಾಗಿರುವುದು ಕಂಡುಬಂದಿತು. ಆದರೆ, ಈ ಕೃತಕ ಮರಳು/ ಜಲ್ಲಿ ಪುಡಿ ಹಾಕಿದರೆ ಒಂದೇ ಮಳೆಗೆ ಮತ್ತದೇ ಸ್ಥಿತಿಯಾಗಲಿದೆ. ಆದ್ದರಿಂದ ಅಧಿಕಾರಿಗಳು ಸಿಮೆಂಟ್ ಪ್ಲಾಸ್ಟರ್ ಹಾಕುವ ಮೂಲಕ ಶಾಶ್ವತ ಕಾಮಗಾರಿ ಮಾಡಬೇಕಿದೆ. ಜತೆಗೆ, ಕಳಪೆ ಕಾಮಗಾರಿಗೆ ಕಾರಣರಾಗಿರುವ ಎಲ್ಲರ ವಿರುದ್ಧ ಕ್ರಮ ಜರುಗಿಸಬೇಕಿದೆ ಎನ್ನುತ್ತಾರೆ ನಾಗರಿಕರು.

ಈಗಾಗಲೆ ರಸ್ತೆ ಹಾಗೂ ವಿದ್ಯುತ್ ಕಂಬಗಳ ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಮರು ಪರಿಶೀಲನೆ ನಡೆಸಿ ಶೀಘ್ರವೇ ದುರಸ್ತಿ ಮಾಡಲಾಗುವುದು. | ಹರೀಶ ಬಂಡಿವಡ್ಡರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೆದ್ದಾರಿ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದ್ದು, ಬೇಗ ದುರಸ್ತಿಪಡಿಸಬೇಕು. ರಸ್ತೆ ಪಕ್ಕದ ಕಾಲು ದಾರಿಗೆ ಮಣ್ಣು ಹಾಕಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಶೀಘ್ರದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ಶಂಕರಗೌಡ ಭಾವಿಕಟ್ಟಿ ತಾಲೂಕಾಧ್ಯಕ್ಷ, ಕರವೇ ಪ್ರವೀಣ ಶೆಟ್ಟಿ ಬಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net