

ಕಲಘಟಗಿ: ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ಸಹಕಾರಿ ಶಿಕ್ಷಣ ಸಂಘದ ಅಧ್ಯಕ್ಷ ಐ.ಸಿ. ಗೋಕುಲ ಹೇಳಿದರು.
ತಾಲೂಕಿನ ಮಿಶ್ರಿಕೋಟಿ ಗ್ರಾಮದ ಸಹಕಾರಿ ಶಿಕ್ಷಣ ಸಂಘದ ಸಿಇಎಸ್‌ಎಸ್‌ಜೆ ಸಂಯುಕ್ತ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಪಿಯು ಕಾಲೇಜ್ ಹಾಗೂ ಸಿಇಎಸ್ ಕಾನ್ವೆಂಟ್ ಮಾದರಿ ಕನ್ನಡ ಹಿರಿಯ ಪ್ರಾಥಮಿಕ, ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ, 7ನೇ ತರಗತಿ, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯ ಮೂರೂ ವಿಭಾಗದ ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಮಕ್ಕಳು ಪಾಠ, ಆಟೋಟಗಳಲ್ಲಿ ಉತ್ತಮ ಸಾಧನೆಗೈದಿದ್ದಾರೆ ಎಂದರು.
ಯುವ ಧುರೀಣ ಶಶಿಧರ ನಿಂಬಣ್ಣವರ ಮಾತನಾಡಿ, ಪಾಲಕರು ಮಕ್ಕಳಿಗೆ ಹಣ, ಆಸ್ತಿ, ಬಂಗಾರ ಮಾಡಿಡುವುದಕ್ಕಿಂತ ಅವರು ಎಲ್ಲಿಯವರೆಗೆ ಓದಲು ಬಯಸುತ್ತಾರೆಯೋ ಅಲ್ಲಿಯವರೆಗೆ ಓದಿಸಬೇಕು. ಈ ಹಿನ್ನೆಲೆಯಲ್ಲಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.
ಕಾಲೇಜ್ ಪ್ರಾಚಾರ್ಯ ಸುರೇಶ ಮರಲಿಂಗಣ್ಣವರ ಮಾತನಾಡಿ, ನಮ್ಮ ಸಂಸ್ಥೆಯ ಶಾಲೆ, ಕಾಲೇಜು ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂದೆ ಇದ್ದಾರೆ. ಹೆಚ್ಚಿನ ಪಾಲು ಬಹುಮಾನಗಳನ್ನು ವಿದ್ಯಾರ್ಥಿನಿಯರೇ ಪಡೆದಿದ್ದಾರೆ ಎಂದರು.
ಪ್ರೌಢಶಾಲೆ, ಪಪೂ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉತ್ತಮ ವಿದ್ಯಾರ್ಥಿ ಪ್ರಶಸ್ತಿ, ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆಗೈದವರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ವಿದ್ಯಾರ್ಥಿಗಳು ರಚಿಸಿದ ಕೈಬರಹ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಸಂಘದ ಉಪಾಧ್ಯಕ್ಷ ಪರಶುರಾಮ ರಜಪೂತ, ಕಾರ್ಯದರ್ಶಿ ಜೆ.ಎಸ್. ಹಿರೇಮಠ, ಗ್ರಾಪಂ ಅಧ್ಯಕ್ಷ ಹನುಮಂತಗೌಡ ಪಾಟೀಲ, ಉಪಾಧ್ಯಕ್ಷೆ ರುಸ್ತುಂಬಿ ದುಖಾನದಾರ, ಸುರೇಶ ಶೀಲವಂತರ, ಸುರೇಶ ಭೋವಿ, ಬಸನಗೌಡ ಸಣಗೌಡ್ರ, ಸುರೇಶ ಮುದೇನವರ, ಯಲ್ಲಪ್ಪ ನರೇಂದ್ರ, ನೀಲಮ್ಮ ಶಿಂತ್ರಿ, ದಾಕ್ಷಾಯಿಣಿ ಮುದೇನವರ ಕರಬಸಪಗಪ ಮನಗುಂಡಿ, ಗಿರಿಜವ್ವ ಕಮ್ಮಾರ, ಸವಿತಾ ಭೋವಿ, ಗುರುನಾಥ ಚಲವಾದಿ, ಖಾತುನಬಿ ನದಾಫ್, ಶಿಕ್ಷಕರು, ಉಪನ್ಯಾಸಕರು ಇದ್ದರು. ಹಿರಿಯ ಶಿಕ್ಷಕ ಸಿ.ಬಿ. ಗುಡಿಮನಿ, ಎಂ.ಬಿ. ಹುಲಮನಿ, ಎಸ್.ಎಸ್. ಸುರೇಗಾಂವಕರ ಕಾರ್ಯಕ್ರಮ ನಿರ್ವಹಿಸಿದರು.