

ಕಲಘಟಗಿ: ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಶುಕ್ರವಾರ ಸಂತೆ ದಿನವಾಗಿದ್ದು, ಇಲ್ಲಿಂದ ಸಂಜೆ ವೇಳೆ ಬೇರೆ ಊರುಗಳಿಗೆ ತೆರಳಲು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡಿದರು.
ಕಲಘಟಗಿಯಿಂದ ಸಂಜೆ 4.15ಕ್ಕೆ ಹೊರಡುವ ಒಂದು ಬಸ್ ಬಗಡಗೇರಿ, ಗಂಜೀಗಟ್ಟಿ ಹಾಗೂ ಭೊಗೇನಾಗರಕೊಪ್ಪ ಗ್ರಾಮ ಮಾರ್ಗವಾಗಿ ಮಿಶ್ರಿಕೋಟಿ ಬರುತ್ತದೆ. ಮಿಶ್ರಿಕೋಟಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮರಳಿ ಬಗಡಗೇರಿ, ಗಂಜೀಗಟ್ಟಿ, ಭೊಗೇನಾಗರಕೊಪ್ಪ ಮಾರ್ಗವಾಗಿ ಕಲಘಟಗಿಗೆ ತೆರಳುತ್ತದೆ.
ಗ್ರಾಮದಲ್ಲಿ ಶುಕ್ರವಾರ ದೊಡ್ಡ ಸಂತೆ ನಡೆಯುತ್ತದೆ. ಶನಿವಾರ ಗಣೇಶನ ಹಬ್ಬ ಕೂಡ ಇದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂತೆ, ಪೇಟೆಗೆ ಬಂದಿದ್ದರು. ಜತೆಗೆ ನಿತ್ಯದಂತೆ ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಆಗಮಿಸಿದ್ದರು. ಸಂಜೆ ಶಾಲೆ-ಕಾಲೇಜು ಮುಗಿದ ಬಳಿಕ ಬಸ್ಗಾಗಿ ಮಿಶ್ರಿಕೋಟಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು.
ಕಲಘಟಗಿಯಿಂದ ಮಿಶ್ರಿಕೋಟಿಗೆ ಬರಬೇಕಿದ್ದ ಬಸ್ ಅನ್ನು ಚಾಲಕರು ಮತ್ತು ನಿರ್ವಾಹಕರು ಶುಕ್ರವಾರ ಭೋಗೇನಾಗರಕೊಪ್ಪದಿಂದ ಮರಳಿ ಕಲಘಟಗಿಗೆ ಓಡಿಸಿದ್ದಾರೆ. ಹೀಗಾಗಿ, ನಾವು ಇಲ್ಲಿ ಬಸ್ಗಾಗಿ ಗಂಟೆಗಟ್ಟಲೇ ಕಾಯುತ್ತಿದ್ದೇವೆ. ಚಾಲಕರು ಮತ್ತು ನಿರ್ವಾಹಕರು ಮಾಡುವ ಎಡವಟ್ಟಿನಿಂದ ವಿದ್ಯಾರ್ಥಿನಿಯರು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ. ಇದು ವಾರದಲ್ಲಿ ಎರಡ್ಮೂರು ಬಾರಿ ಹೀಗೆ ಆಗುತ್ತದೆ. ಹೀಗಾಗಿ, ಮನೆ ಸೇರಲು ರಾತ್ರಿ 8 ಗಂಟೆ ಆಗುತ್ತದೆ. ನಾವು ಮನೆ ಸೇರುವವರೆಗೆ ಪಾಲಕರು ಆತಂಕದಲ್ಲಿ ಇರುತ್ತಾರೆ ಎನ್ನುತ್ತಾಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಚನ್ನಮ್ಮ ಕರಡಿ.
ಹೀಗೆ ರಾತ್ರಿ ಮನೆಗೆ ತಡವಾಗಿ ಹೋಗುತ್ತಿರುವುದರಿಂದ ಕೆಲ ಪಾಲಕರು ವಿದ್ಯಾರ್ಥಿನಿಯರನ್ನು ಶಾಲೆ-ಕಾಲೇಜಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಕೆಲ ವಿದ್ಯಾರ್ಥಿನಿಯರು.
ಮಿಶ್ರಿಕೋಟಿ ಗ್ರಾಮಕ್ಕೆ ಪಕ್ಕದ ಸುತಗಟ್ಟಿ, ಬಗಡಗೇರಿ, ಗಂಜಿಗಟ್ಟಿ, ಭೋಗೇನಾಗರಕೊಪ್ಪ ಗ್ರಾಮಗಳಿಂದ ವಿದ್ಯಾರ್ಥಿಗಳು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜಿಗೆ ಓದಲು ಬರುತ್ತಾರೆ. ಆದರೆ, ಬೆಳಗಿನ ವೇಳೆ ಮತ್ತು ಸಂಜೆ ಶಾಲೆ ಬಿಡುವ ಹೊತ್ತಿಗೆ ಸರಿಯಾಗಿ ಬಸ್ ಸೌಲಭ್ಯವಿಲ್ಲ. ನಿತ್ಯವೂ ನಮಗೆ ಇದೇ ಗೋಳಾಗಿದೆ ಎನ್ನುತ್ತಾನೆ ವಿದ್ಯಾರ್ಥಿ ಯಲ್ಲಪ್ಪಗೌಡ ಪಾಟೀಲ.
ಬಸ್ ಪಂಕ್ಚರ್, ಜನ ಹೈರಾಣ
ಹುಬ್ಬಳ್ಳಿಯಿಂದ ಗಂಜಿಗಟ್ಟಿಗೆ ಹೊರಟಿದ್ದ ಬಸ್ ಸಂಜೆ 6 ಗಂಟೆಗೆ ಮಿಶ್ರಿಕೋಟಿಗೆ ಬರುತ್ತಿದ್ದಂತೆ ಪಂಕ್ಚರ್ ಆಯಿತು. ಆ ಬಸ್ನಲ್ಲಿ ಕೂಡ ಅಂದಾಜು 120 ಜನ ಪ್ರಯಾಣಿಕರಿದ್ದಾರೆ.
ಸಮಸ್ಯೆ ಬಗೆಹರಿಸಲು ಒತ್ತಾಯ
ತಾಲೂಕಿನ ಅತಿ ದೊಡ್ಡ ಗ್ರಾಮವಾಗಿರುವ ಮಿಶ್ರಿಕೋಟಿಯಲ್ಲಿ ಸುತ್ತಲಿನ ಗ್ರಾಮಗಳಿಗೆ ತೆರಳುವವರಿಗೆ ಸರಿಯಾದ ಬಸ್ ಸೌಲಭ್ಯ ಇಲ್ಲವಾಗಿದೆ. ಮಿಶ್ರಿಕೋಟಿಯಿಂದ ಸಮೀಪದ ಕಾಮಧೇನು, ಹಾರೋಗೇರಿ, ರಾಮನಾಳಕ್ಕೆ ಹೋಗುವ ವಿದ್ಯಾರ್ಥಿಗಳ ಪಾಡು ಕೂಡ ಇದೇ ರೀತಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮಕ್ಕಳು ಆಗ್ರಹಿಸಿದರು.