

ಕಲಘಟಗಿ: ಕಲಘಟಗಿ ಹಾಗೂ ಅಳ್ನಾವರ ಮತಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ತಮ್ಮ ಅಮೃತ ನಿವಾಸದಲ್ಲಿ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಡೀ ರಾಜ್ಯಾದ್ಯಂತ 135 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಕಾರ್ಯಕರ್ತರ ಪಾತ್ರ ಅತಿ ಮುಖ್ಯವಾಗಿದೆ. ಆದ್ದರಿಂದ ಕಾಂಗ್ರೆಸ್‌ನ ಎಲ್ಲ ಕಾರ್ಯಕರ್ತರಿಗೆ ಮೊದಲು ಅಭಿನಂದನೆ ತಿಳಿಸುತ್ತೇನೆ. ಈಗಾಗಲೇ ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಿದ್ದಾರೆ. ಅವರ ಆಶೀರ್ವಾದಕ್ಕೆ ನಾವು ಅಬಾರಿಯಾಗಿದ್ದು, ಆದಷ್ಟು ಬೇಗ ನಮ್ಮ ಗ್ಯಾರಂಟಿಗಳನ್ನು ಜಾರಿಗೆ ತರುವಲ್ಲಿ ಶ್ರಮಿಸುತ್ತೇವೆ ಎಂದರು.
ನಮ್ಮ ಪ್ರಣಾಳಿಕೆಯ 5 ಗ್ಯಾರಂಟಿಗಳನ್ನು ಜಾರಿಗೆ ತರಬೇಕಾದರೆ ಅಂದಾಜು 60 ಸಾವಿರ ಕೋಟಿ ರೂ. ಬೇಕಿದ್ದು, ಇದೆಲ್ಲವನ್ನು ನೀಗಿಸಲು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ. ನಮ್ಮ ಗ್ಯಾರಂಟಿಗಳ ಪೈಕಿ ಈಗಾಗಲೇ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದ್ದು, ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಂತಾಗಿದೆ. ಆ.15 ಕ್ಕೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುತ್ತದೆ ಹಾಗೂ ಇನ್ನುಳಿದ 3 ಗ್ಯಾರಂಟಿಗಳನ್ನು ಶೀಘ್ರ ಜಾರಿಗೆ ತರುವಲ್ಲಿ ಪ್ರಯತ್ನಿಸುತ್ತಿದ್ದೇವೆ ಎಂದರು.
ಅರೇ ಮಲೆನಾಡು ಎಂದು ಕರೆಸಿಕೊಳ್ಳುವ ಕಲಘಟಗಿ ಕ್ಷೇತ್ರದಲ್ಲಿನ 35 ಕರೆಗೆಳಿಗೆ ಡಿಸೆಂಬರ್ ಒಳಗಾಗಿ ಬೇಡ್ತಿ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ. ತಾಲೂಕಿನಲ್ಲಿ ಜನಸಾಮಾನ್ಯರಿಗೆ ಕುಡಿಯುವ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾಲಿದ್ದು, ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಎಸ್.ಆರ್. ಪಾಟೀಲ, ವೈ.ಬಿ. ದಾಸನಕೊಪ್ಪ, ಹರಿಶಂಕರ ಮಠದ, ಮಂಜುನಾಥಗೌಡ ಮುರಳ್ಳಿ, ಬಿ.ವೈ. ಪಾಟೀಲ, ಶಿವಾಜಿ ವಾಘ್ಮೋಡೆ, ವೈ.ಎನ್. ಹುದ್ದಾರ, ವೃಷಬೇಂದ್ರ ಪಟ್ಟಣಶೆಟ್ಟಿ, ಬಾಬು ಅಂಚಟಗೇರಿ, ನರೇಶ ಮಲೆನಾಡು, ಕುಮಾರ ಕಂಡೇಕರ, ಹನುಮಂತ ಕಾಳೆ, ಎಸ್.ವಿ. ತಡಸಮಠ, ಬಾಳು ಖಾನಾಪೂರ, ಗಂಗಾಧರ ಚಿಕ್ಕಮಠ, ಅಜಮತ್ ಜಾಹಗೀರದಾರ, ಸೋಮಶೇಖರ ಬೆನ್ನೂರ, ಶಂಕರಗಿರಿ ಭಾವನವರ, ಶಿವಪ್ಪ ಲಮಾಣಿ, ಯಲ್ಲಪ್ಪ ಮೇಲಿನಮನಿ, ಮಂಜುಳಾ ದೇವಲಾಪೂರ, ಮಾಲಾ ತುರಿಹಾಳ ಇದ್ದರು.
ಮತಕ್ಷೇತ್ರದ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಆಶೀರ್ವದಿಸಿದ್ದರಿಂದ ನನಗೆ ಸಚಿವ ಸ್ಥಾನ ದೊರಕಿದೆ. ಅವರಿಗೆ ಕೃತಜ್ಞತೆ ಸಲ್ಲಿಸಿ ಜನರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪ್ರತಿವಾರ ತಾಲೂಕಿನಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಕಷ್ಟ ಆಲಿಸುವಲ್ಲಿ ಶ್ರಮವಹಿಸುತ್ತೇನೆ ಎಂದು ಸಂತೋಷ ಲಾಡ ಹೇಳಿದರು.