

ವೀರೇಶ ಹಾರೊಗೇರಿ ಕಲಘಟಗಿ
ಆಧಾರ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಗ್ರಾಮೀಣ ಭಾಗದ ಜನರ ಗೋಳಾಟ ದಿನೇದಿನೆ ಹೆಚ್ಚಾಗುತ್ತಿದೆ. ಸಾರ್ವಜನಿಕರ ಬ್ಯಾಂಕ್ ಖಾತೆ, ಪಾನ್ ಕಾರ್ಡ್ ಮತ್ತಿತರ ಗುರುತಿನ ಚೀಟಿಗಳಿಗೆ ಆಧಾರ ಲಿಂಕ್ ಮಾಡಬೇಕು ಎಂದು ಸರ್ಕಾರ ನಿಯಮ ಮಾಡಿದೆ. ಇದರಿಂದ ಬ್ಯಾಂಕ್ ಖಾತೆ ಮತ್ತಿತರ ಕಡೆ ಲಿಂಕ್ ಮಾಡಲು ಆಧಾರ ಕಾರ್ಡ್ ನಲ್ಲಿ ಸಣ್ಣಪುಟ್ಟ ಅಕ್ಷರ ದೋಷಗಳಿದ್ದರೂ ಅದು ಲಿಂಕ್ ಆಗುವುದಿಲ್ಲ. ಆಗ ಸಾರ್ವಜನಿಕರು ಹೆಸರು, ವಿಳಾಸ ಮತ್ತಿತರ ತಿದ್ದುಪಡಿಗಾಗಿ ಆಧಾರ ಕೇಂದ್ರಗಳಿಗೆ ಬರುತ್ತಾರೆ.
ಕಳೆದ ಕೆಲವು ತಿಂಗಳ ಹಿಂದೆ ಕಲಘಟಗಿ ಪಟ್ಟಣದಲ್ಲಿನ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕ್, ಅಂಚೆ ಕಚೇರಿ, ಭಾರತೀಯ ಸ್ಟೇಟ್ ಬ್ಯಾಂಕ್, ತಹಸೀಲ್ದಾರ್ ಕಚೇರಿಯಲ್ಲೂ ಆಧಾರ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇತ್ತೀಚೆಗೆ ತಹಸೀಲ್ದಾರ್ ಕಚೇರಿಯಲ್ಲಿ ಹೊರತುಪಡಿಸಿ ಉಳಿದ ಎಲ್ಲ ಕೇಂದ್ರಗಳಲ್ಲಿ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಜನರು ನೋಂದಣಿ ಹಾಗೂ ತಿದ್ದುಪಡಿಗಳಿಗಾಗಿ ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ. ತಾಲೂಕಿನಲ್ಲಿ 82ಕ್ಕೂ ಅಧಿಕ ಹಳ್ಳಿಗಳಿವೆ. ಪ್ರತಿಯೊಂದು ಹಳ್ಳಿಗಳಿಂದ ದಿನಕ್ಕೆ ನೂರಾರು ಜನರು ಆಧಾರ ಕಾರ್ಡ್ ತಿದ್ದುಪಡಿಗಾಗಿ ಮನೆ, ಹೊಲದ ಕೆಲಸ ಬಿಟ್ಟು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಕೆಲವರ ತಿದ್ದುಪಡಿ ಕಾರ್ಯಗಳು ಒಂದೇ ದಿನಕ್ಕೆ ಮುಗಿಯುತ್ತಿಲ್ಲ. ಬೆಳಗ್ಗೆ 10ಕ್ಕೆ ಕೂಪನ್ ಕೊಟ್ಟರೆ ಸಂಜೆ ಹೊತ್ತಿಗೆ ನಮ್ಮ ಸರದಿ ಬರುತ್ತದೆ. ಅಲ್ಲಿವರೆಗೂ ನಾವು ಊಟ-ಕೆಲಸ ಬಿಟ್ಟು ಸರದಿಯಲ್ಲಿ ನಿಲ್ಲಬೇಕು. ಒಂದೊಂದು ಸಾರಿ ಎರಡೆರೆಡು ದಿನವಾದರೂ ಸರದಿ ಬಂದಿಲ್ಲ. ಆಧಾರ ಕಾರ್ಡ್ ತಿದ್ದುಪಡಿ ಆಗುತ್ತಿಲ್ಲ. ಇದರಿಂದ ನಮ್ಮ ಉಪಜೀವನಕ್ಕೂ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡರು.
ಸರ್ವರ್ ಸಮಸ್ಯೆ: ತಾಲೂಕಿನಲ್ಲಿ ಆಧಾರ ತಿದ್ದುಪಡಿ ಕೇಂದ್ರ ಒಂದೇ ಆಗಿರುವುದರಿಂದ ಜನದಟ್ಟಣೆ ಆಗುತ್ತಿದೆ. ಮೇಲಿಂದ ಮೇಲೆ ಸರ್ವರ್ ಸಮಸ್ಯೆ ಉಂಟಾಗುತ್ತಿದೆ. ಸಹಜವಾಗಿ ಬಯೋಮೆಟ್ರಿಕ್ ಸಮಸ್ಯೆ ಕಾಡುತ್ತಿವೆ ಎನ್ನುತ್ತಾರೆ ಆಧಾರ ಕೇಂದ್ರದ ಸಿಬ್ಬಂದಿ.
ದಿನಂಪ್ರತಿ ನಾವು ಆಧಾರ ಕಾರ್ಡ್ ತಿದ್ದುಪಡಿಗಾಗಿ ಹೊಲದ ಕೆಲಸಗಳನ್ನು ಬಿಟ್ಟು ಬರುವಂತಾಗಿದೆ. ಇದೇ ಕೇಂದ್ರವನ್ನು ನಮ್ಮ ಗ್ರಾಮ ಪಂಚಾಯಿತಿ ಹಾಗೂ ಊರಿಗೆ ಹತ್ತಿರದಲ್ಲಿ ಮಾಡಬೇಕು. ಇದರಿಂದ ಗ್ರಾಮೀಣ ರೈತರಿಗೆ ಹಾಗೂ ಹಿರಿಯರಿಗೆ ಅನುಕೂಲವಾಗುತ್ತದೆ.ನೀಲಪ್ಪ ಸಂತಿ ರೈತ ಪ್ರತಿದಿನ ಬೆಳಗ್ಗೆ ನೋಂದಣಿಗಾಗಿ ಬಂದ ಸಾರ್ವಜನಿಕರಿಗೆ ಕೂಪನ್‌ಗಳನ್ನ ನೀಡಲಾಗುತ್ತದೆ. ಸರದಿಯಂತೆ ಅವರ ನೋಂದಣಿ ಹಾಗೂ ತಿದ್ದುಪಡಿ ಮಾಡುತ್ತಿದ್ದೇವೆ. ಆದರೆ, ಕಲಘಟಗಿ ಯಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಒಂದೇ ನೋಂದಣಿ ಕೇಂದ್ರ ಇದೆ. ದಿನಕ್ಕೆ 25 ರಿಂದ 30 ಕಾರ್ಡ್‌ಗಳು ಮಾತ್ರ ತಿದ್ದುಪಡಿ ಆಗುತ್ತಿವೆ.ಮಹದೇವಪ್ಪ ಬಮ್ಮಿಗಟ್ಟಿಆಧಾರ ಕಾರ್ಡ್ ಕೇಂದ್ರದ ಆಪರೇಟರ್