ಮೈಸೂರು: ನಗರದ ಕಲಾಧಾರೆ ಕಲ್ಚರಲ್ ಟ್ರಸ್ಟ್‌ನಿಂದ ಫೆ.4ರಂದು 23ನೇ ವರ್ಷದ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ಕಲಾಧಾರೆ-2024’ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಚಾಮರಾಜ್ ತಿಳಿಸಿದರು.
ರಾಮಕೃಷ್ಣ ನಗರದಲ್ಲಿನ ರಮಾಗೋವಿಂದ ರಂಗಮಂದಿರದಲ್ಲಿ ಅಂದು ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆವಿಗೂ ನಿರಂತರವಾಗಿ ವಿವಿಧ ವಿಭಾಗದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಯೋಮಾನಕ್ಕೆ ತಕ್ಕಂತೆ ವಿವಿಧ ವಿಭಾಗದಲ್ಲಿ ಭರತನಾಟ್ಯ, ಜಾನಪದ, ಪಾಶ್ಚಿಮಾತ್ಯ ನೃತ್ಯ, ಚಲನಚಿತ್ರ ಗೀತೆ, ಏಕಪಾತ್ರಾಭಿನಯ ಇರಲಿದೆ. ಅಲ್ಲದೆ ಚಿತ್ರಕಲೆ, ವಿವಿಧ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು.
ವಿವಿಧ ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸಲಿದ್ದು, ವಿಜೇತರಾದವರಿಗೆ ಪ್ರಶಸ್ತಿ, ಪ್ರಮಾಣಪತ್ರ, ಗೌರವ ಪುರಸ್ಕಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಟ್ರಸ್ಟ್ ಅಧ್ಯಕ್ಷ ಉಮಾಪತಿ, ಗೌರವ ಸಲಹೆಗಾರ ಎಸ್.ಆನಂದ್, ಕಲಾ ಪೋಷಕರಾದ ಸವಿತಾ ಪ.ಮಲ್ಲೇಶ್ ಇದ್ದರು.